ಕ್ರೈಸ್ತ ಧರ್ಮ

	ಯೇಸು ಕ್ರಿಸ್ತನ ಉಪದೇಶದ ಆಧಾರದ ಮೇಲೆ ಹುಟ್ಟಿ ಬೆಳೆದು ಬಂದಿರುವ ಎಲ್ಲ ಸಿದ್ಧಾಂತಗಳಿಗೂ ಮತ ಸಂಸ್ಥೆಗಳಿಗೂ ಒಟ್ಟಾಗಿ ಅನ್ವಯವಾಗುವ ಪದವಿದು. ಈ ಧರ್ಮವನ್ನು ಅನುಸರಿಸುವವರೆಲ್ಲರನ್ನೂ ಒಟ್ಟಾಗಿ ಕ್ರೈಸ್ತರೆನ್ನುತ್ತೇವೆ. ಎರಡು ಸಾವಿರ ವರ್ಷಗಳ ಹಿಂದೆ ಪ್ಯಾಲಸ್ಟೈನ್ ದೇಶದಲ್ಲಿ ಆರಂಭವಾಗಿ ಈಗ ಲೋಕದಲ್ಲೆಲ್ಲ ಹಬ್ಬಿಕೊಂಡಿರುವ ಕ್ರೈಸ್ತಧರ್ಮ ಸುಮಾರು 850 ದಶಲಕ್ಷ ಮತಾನುಯಾಯಿಗಳನ್ನೊಳಗೊಂಡಿದೆ. ಜಗತ್ತಿನ ಪ್ರಮುಖ ಧರ್ಮಗಳಲ್ಲೊಂದಾಗಿದ್ದು ಅನೇಕ ಪಂಗಡಗಳಾಗಿ ವಿಭಾಗಿಸಲ್ಪಟ್ಟಿದ್ದು ಬೇರೆ ಬೇರೆ ಸಾಂಸ್ಕøತಿಕ ಹಿನ್ನೆಲೆಗಳಿರುವ ಜನಾಂಗಗಳ ಮಧ್ಯೆ ಇರುವುದಾದರೂ ಈ ಧರ್ಮದಲ್ಲಿ ತಾತ್ತ್ವಿಕ ಏಕತೆ ಇದೆ ಎಂಬುದನ್ನು ಮರೆಯಬಾರದು. ಈ ಲೇಖನದಲ್ಲಿ ಕ್ರೈಸ್ತಧರ್ಮದ ಇತಿಹಾಸ, ತಿರುಳು, ಸಭೆಯ ಆಡಳಿತ ವ್ಯವಸ್ಥೆ, ಭಾರತದಲ್ಲಿ ಅದು ಹರಡಿದ ಬಗೆ - ಈ ವಿಷಯಗಳನ್ನು ಸಂಗ್ರಹವಾಗಿ ತಿಳಿಸಿದೆ.

	(ಎ) ಕ್ರೈಸ್ತ ಧರ್ಮದ ಸಂಸ್ಥಾಪಕ ಯೇಸುಕ್ರಿಸ್ತ. ಆತನ ಜೀವನ, ಮರಣ, ಪುನರುತ್ಥಾನ, ಬೋಧನೆ ಮತ್ತು ದೇವರ ಪ್ರೀತಿಯನ್ನು ಪ್ರಕಟಿಸಿ ಮಾನವ ಕುಲಕ್ಕೆಲ್ಲ ಆತ ತೋರಿದ ರಕ್ಷಣಾಮಾರ್ಗ-ಈ ಅಂಶಗಳ ಮೇಲೆ ಕ್ರೈಸ್ತ ಧರ್ಮ ನಿಂತಿದೆ.

	ಯೇಸು ಕ್ರಿಸ್ತ ತನ್ನ ಲೋಕಸೇವೆಯನ್ನು ಆರಂಭಿಸುವಾಗ ಹನ್ನೆರಡು ಮಂದಿ ಶಿಷ್ಯರನ್ನು ಆರಿಸಿಕೊಂಡದ್ದರಲ್ಲೇ ಒಂದು ಧಾರ್ಮಿಕ ಸಂಘ ಅಥವಾ ಸಭೆಯನ್ನು ಕಟ್ಟುವ ಉದ್ದೇಶ ಆತನಿಗಿತ್ತೆಂಬುದು ಸ್ಪಷ್ಟವಾಗುತ್ತದೆ. ದೈವ ಪ್ರೀತಿ ಪ್ರಕಟನೆಯೂ ಪಾಪಿ ಮಾನವ ರಕ್ಷಣೆಯೂ ಆತನ ಮುಖ್ಯ ಉದ್ದೇಶವಾಗಿದ್ದುದರಿಂದ, ಜನ ಆತನನ್ನ ಹೆಚ್ಚಾಗಿ ಹಿಂಬಾಲಿಸುತ್ತಿದ್ದರೂ ಅವರನ್ನು ಒಂದು ಸಭೆಯಾಗಿ ಕೂಡಿಸಿ ಕ್ರಮಸೂತ್ರಗಳ ಮೂಲಕ ಸಂಘಟಿಸುವುದಕ್ಕೆ ಆತ ಹೆಚ್ಚಿನ ಗಮನ ಕೊಡಲಿಲ್ಲ. ಆದರೆ ಆತನ ಪುನರುತ್ಥಾನದ ತರುವಾಯ ಶಿಷ್ಯರು ಸುವಾರ್ತಾ ಸಂದೇಶವನ್ನು ಸಾರಿದ್ದರ ಫಲವಾಗಿ ಅನೇಕ ಮಂದಿ ಆತನ ಶಿಷ್ಯರ ಗುಂಪನ್ನು ಸೇರಿದರು. ಈ ಲೇಖನದಲ್ಲಿ ಮುಂದೆ ಧರ್ಮಸಭೆ, ಕ್ರೈಸ್ತ ಸಭೆ, ಸಭೆ, ಧಾರ್ಮಿಕ ಸಂಘ-ಈ ಮಾತುಗಳನ್ನು ಚರ್ಚು ಎಂಬ ಅರ್ಥದಲ್ಲಿ ಬಳಸಿದೆ. ಕಾಲಕ್ರಮೇಣ ಇವರನ್ನು ಕ್ರೈಸ್ತ ಸಭೆಯಾಗಿ ಸಂಘಟಿಸುವ ಅಗತ್ಯ ಸಹಜವಾಗಿ ಬಂದೊದಗಿತು. ಆದಿ ಕ್ರೈಸ್ತ ಸಭೆಯಲ್ಲಿದ್ದ ಪೀಟರ್, ಯೋಹಾನ, ಯಾಕೋಬ ಮತ್ತು ಪಾಲನೇ ಮೊದಲಾದ ಮುಂದಾಳುಗಳು ಈ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದರು.

	(ಬಿ) ಕ್ರೈಸ್ತ ಸುವಾರ್ತೆಯನ್ನು ಭೂಮಧ್ಯ ಸಮುದ್ರದ ದೇಶಗಳಲ್ಲಿ ಪ್ರಚುರಪಡಿಸಿ ಅನೇಕ ಸಭೆಗಳನ್ನು ಸ್ಥಾಪಿಸಿ ಕ್ರೈಸ್ತಧರ್ಮದ ಚಾರಿತ್ರಿಕ ಮುನ್ನಡೆಗೆ ಬಲವಾದ ಪ್ರೇರಣೆಯನ್ನಿತ್ತು ಅದಕ್ಕಾಗಿ ಕೆಲಸ ಮಾಡಿದಾತ ಅಪೋಸಲರಲ್ಲೊಬ್ಬನಾದ ಪಾಲನೇ. ಪಾಲ್ ಕ್ರಿಸ್ತನಿಗಿಂತ ಮುಂಚೆ ಟಾರ್‍ಸಸ್ ಎಂಬ ಪಟ್ಟಣದಲ್ಲಿ ಹುಟ್ಟಿದ, ಉತ್ತಮ ಕುಲದ ಒಬ್ಬ ಯೆಹೂದ್ಯ ; ರೋಮ್ ಸಾಮ್ರಾಜ್ಯದ ಹಕ್ಕುಳ್ಳ ನಾಗರಿಕ; ಯೆಹೂದ್ಯ ತತ್ತ್ವ ಮತ್ತು ನ್ಯಾಯ ಪ್ರಮಾಣದಲ್ಲಿ ಘನ ಪಂಡಿತನಾಗಿದ್ದ ವ್ಯಕ್ತಿ. ಆರಂಭದಲ್ಲಿ ಕ್ರೈಸ್ತರನ್ನು ನಾನಾ ವಿಧವಾಗಿ ಹಿಂಸೆಗೆ ಗುರಿ ಪಡಿಸಿದರೂ ಕೊನೆಗೆ ತಾನೇ ಯೇಸುಕ್ರಿಸ್ತನ ದರ್ಶನದಿಂದ ಆತನ ಶಿಷ್ಯನಾದವ. ಆಮೇಲೆ ಈ ಶ್ರೇಷ್ಠ ಭಕ್ತ ತನ್ನ ಸಂಪೂರ್ಣ ಜೀವನವನ್ನೇ ಯೇಸುಕ್ರಿಸ್ತನ ಸುವಾರ್ತೆಯನ್ನು ಸಾರುವ ಸೇವೆಗೆ ಮೀಸಲಾಗಿಟ್ಟು ಸುಮಾರು ಮೂವತ್ತು ವರ್ಷಗಳ ಸೇವಾ ಕಾಲದಲ್ಲಿ ಬಹು ಕಷ್ಟ ನಷ್ಟಗಳಿಗೊಳಗಾಗಿ ಅನೇಕ ಸಭೆಗಳನ್ನು ಸ್ಥಾಪಿಸಿದ. ಕ್ರಿಸ್ತಶಕ ಸುಮಾರು 64ರಲ್ಲಿ ಈತ ಹುತಾತ್ಮನಾದ ಎಂಬ ಪ್ರತೀತಿಯಿದೆ. ಪಾಲನ ತತ್ತ್ವನಿರೂಪಣಾ ರೀತಿ, ಬೋಧನಾ ಕ್ರಮ , ಸಂಘಟನಾಶಕ್ತಿ ಮತ್ತು ಸುವಾರ್ತಾಸೇವೆ-ಇವುಗಳಲ್ಲದಿದ್ದರೆ ಕ್ರೈಸ್ತ ಧರ್ಮ ಯೆಹೂದ್ಯರಲ್ಲಿ ಒಂದು ಪಂಗಡದ ಮತವಾಗಿ ಉಳಿಯಬಹುದಿತ್ತೇ ಹೊರತು ಸಾರ್ವತ್ರಿಕ ಧರ್ಮವಾಗುತ್ತಿರಲಿಲ್ಲ.

	ಯೇಸುಕ್ರಿಸ್ತ ಯೆಹೂದ್ಯರ ನಿರೀಕ್ಷೆಯನ್ನು ಸಂಪೂರ್ಣಗೊಳಿಸಿದ ಬರೇ ಮೆಸೈಯ (ಉದ್ಧಾರಕ) ಮಾತ್ರವಲ್ಲ. ಪುನರುತ್ಥಾನದ ಕರ್ತನೂ ಹೌದು. ಕ್ರೈಸ್ತ ಸಂದೇಶದ ಕೇಂದ್ರಸ್ಥಾನ ಯೇಸುಕ್ರಿಸ್ತನ ಮರಣದಲ್ಲಿದೆ. ಈ ಮರಣ ಮಾನವರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ದೇವರು ತಾನೇ ಕೈಗೊಂಡ ಮಾರ್ಗ. ಯೇಸುಕ್ರಿಸ್ತ ಯೆಹೂದ್ಯರ ನ್ಯಾಯಪ್ರಮಾಣವನ್ನು ಸಂಪೂರ್ಣಗೊಳಿಸಿದ್ದರಿಂದ ಇನ್ನು ಮುಂದೆ ಕರ್ಮಮಾರ್ಗದ ಅಗತ್ಯವಿಲ್ಲ. ಕೇವಲ ಕೃಪೆಯಿಂದಲೇ ನಂಬಿಕೆಯಿಂದಲೇ ರಕ್ಷಣೆ ದೊರಕುವ ಸಾಧ್ಯತೆ ಇದೆ. ಕ್ರಿಸ್ತ ಮಾನವಕುಲದ ಪರವಾಗಿ ಮರಣ ಹೊಂದಿದ್ದರಿಂದ ಆತನ ಮರಣವನ್ನು ಪ್ರಾಯಶ್ಚಿತ್ತ ಯಜ್ಞವೆಂಬುದಾಗಿ ತಿಳಿದುಕೊಳ್ಳತಕ್ಕದ್ದು. ಇದು ಪಾಲನ ಬೋಧನೆಯ ಸಾರಾಂಶ. ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತ ನಿಯಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟ. ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತ ನಮಗೋಸ್ಕರ ಪ್ರಾಣ ಕೊಟ್ಟಿದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ಇಂಥ ಸುವಾರ್ತಾ ಸಂದೇಶವನ್ನೂ ಬೋಧನೆಯನ್ನೂ ಬರಿಯ ತಾತ್ತ್ವಿಕ ದೃಷ್ಟಿಯಿಂದ ಬೋಧಿಸುವುದು ಮಾತ್ರ ಪಾಲನ ಉದ್ದೇಶವಾಗಿರಲಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತ ಸಭೆಗಳನ್ನು ಸ್ಥಾಪಿಸಿ ಯೋಗ್ಯ ಆಡಳಿತ ಕ್ರಮಗಳ ಮೂಲಕ ಅವನ್ನು ಸಂಘಟಿಸಿದ್ದರಿಂದ ಕ್ರೈಸ್ತಧರ್ಮ ರೋಮ್ ಸಾಮ್ರಾಜ್ಯದಲ್ಲಿ ಬಲವಾಗಿ ಬೇರೂರಲೂ ಹಬ್ಬಲೂ ಸಾಧ್ಯವಾಯಿತು. (ಸಿ) ಆದಿ ಕ್ರೈಸ್ತ ಸಭೆಯನ್ನು ಕಟ್ಟುವ ಕೆಲಸದಲ್ಲಿ ಪಾಲನಂತೆ ಇತರರೂ ನೆರವಾಗಿದ್ದರು. ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಮುಂದಾಳುವಾಗಿದ್ದ ಸಿಮೋನ್ ಪೀಟರ್ ಕೂಡ ಇದಕ್ಕಾಗಿ ಹೆಚ್ಚಿನ ಕೆಲಸ ಮಾಡಿದ. ಕ್ರೈಸ್ತಧರ್ಮವನ್ನು ಯೆಹೂದ್ಯರ ಮಧ್ಯದಲ್ಲಿ ಸ್ಥಾಪಿಸಲು ಮತ್ತು ಯೆಹೂದ್ಯರ ನ್ಯಾಯಪ್ರಮಾಣಕ್ಕೆ ಕ್ರೈಸ್ತಧರ್ಮ ನಿರೂಪಣೆಯಲ್ಲಿ ತಕ್ಕ ಸ್ಥಾನವನ್ನು ಕೊಡಲು ಪೀಟರ್ ಹೆಚ್ಚಿನ ಪ್ರಯತ್ನ ಮಾಡಿದರೂ ಯೆಹೂದ್ಯರಲ್ಲದವರಿಗೆ ಕ್ರೈಸ್ತ ಸಂದೇಶವನ್ನು ಸಾರುವುದಕ್ಕೆ ಆತ ಅಡ್ಡಿ ಮಾಡಲಿಲ್ಲ. ಯೇಸುಕ್ರಿಸ್ತನ ಪುನರುತ್ಥಾನದ ಅನಂತರ ಸುವಾರ್ತೆಯನ್ನು ಜನರಲ್ಲಿ ಹರಡಿ, ಸಾವಿರಾರು ಮಂದಿ ಕ್ರೈಸ್ತ ಸಭೆಯಲ್ಲಿ ಸೇರಿಕೊಳ್ಳುವಂತೆ ಮಾಡಿದವರಲ್ಲಿ ಮುಂದಾಳು ಪೀಟರನೇ. ಇದನ್ನರಿತುದರಿಂದಲೇ ಯೇಸು ಪ್ರಭು ಪೀಟರನೆಂಬ ಬುನಾದಿಯ ಮೇಲೆ(ಪೀಟರನ ಎಂದರೆ ಕಲ್ಲುಬಂಡೆ ಎಂಬ ಅರ್ಥವೂ ಇದೆ) ತನ್ನ ಸಭೆಯನ್ನು ಕಟ್ಟುವುದಾಗಿ ಹೇಳಿದ. 

	ಪಾಲ್, ಪೀಟರರಲ್ಲದೆ ಕ್ರೈಸ್ತ ತತ್ತ್ವ ನಿರೂಪಣೆಯಲ್ಲಿ ಯೋಹಾನನಿಗೂ ಅಗ್ರಸ್ಥಾನ ಸಲ್ಲಬೇಕು. ಯೋಹಾನನ ಸುವಾರ್ತೆಯಲ್ಲಿ ಕ್ರೈಸ್ತ ತತ್ತ್ವ ನಿರೂಪಣೆಗೆ ವಿಶೇಷ ಸ್ಥಾನವಿದೆ. ಆ ಕಾಲದ ಗ್ರೀಕ್ ತತ್ತ್ವಜ್ಞಾನಿಗಳ ಬೋಧನೆಗಳನ್ನು ಗಮನಿಸಿ ಯೇಸುಕ್ರಿಸ್ತನ ಸರಳ ಸುವಾರ್ತೆಯನ್ನು ಅವರು ಒಪ್ಪಬೇಕೆಂಬ ದೃಷ್ಟಿಯಿಂದ ಈತ ನಿರೂಪಿಸಲು ಪ್ರಯತ್ನ ಮಾಡಿದ ಕಾರಣ ಕ್ರೈಸ್ತ ಧರ್ಮ ತನ್ನ ಚಾರಿತ್ರಿಕ ಮುನ್ನಡೆಯಲ್ಲಿ ಇನ್ನೊಂದು ದೊಡ್ಡ ಹೆಜ್ಜೆಯನ್ನಿಟ್ಟಂತಾಯಿತೆಂದು ಹೇಳಬಹುದು. ಯೇಸುಕ್ರಿಸ್ತ ನರಾವತಾರವನ್ನೆತ್ತಿ ಬಂದ ದೇವದೂತ. ಈ ಅವತಾರದ ಮುಖ್ಯ ಉದ್ದೇಶ ದೇವರ ಬೆಳಕನ್ನು ಮಾನವರಿಗೆ ನೀಡುವುದು. ಆ ಬೆಳಕೇ ಮಾನವರಿಗೆ ಜೀವನವನ್ನು ಕೊಡುವಂಥಾದ್ದು. ಯೇಸುಕ್ರಿಸ್ತನ ಚಾರಿತ್ರಿಕ ಜೀವನದಲ್ಲೇ ದೇವರ ಕೃಪೆಯನ್ನೂ ಸತ್ಯವನ್ನೂ ನಾವು ಕಾಣಬಹುದು ಎಂದು ಯೋಹಾನ ಹೇಳುತ್ತಾನೆ. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟ. ಆತನನ್ನು ನಂಬಿದವರಲ್ಲೊಬ್ಬರೂ ನಾಶವಾಗದೆ ಎಲ್ಲರೂ ಶಾಶ್ವತ ಜೀವವನ್ನು ಪಡೆಯಬೇಕು. ದೇವಕುಮಾರನ ಮೂಲಕ ದೊರಕುವ ದೈವಜ್ಞಾನವೇ ಮಾನವ ಜೀವನವನ್ನು ಮಾರ್ಪಡಿಸುವ ಜೀವದಾಯಕವಾದ ಶಕ್ತಿ-ಎಂಬುದು ಈತನ ತತ್ತ್ವ ನಿರೂಪಣೆಯ ಸಾರಾಂಶ.

	ಪಾಲ್ ಮತ್ತು ಪೀಟರರ ಮರಣಾನಂತರ ಮೆಡಿಟರೇನಿಯನ್ ಸಮುದ್ರದ ರೋಮಕ ಸಂಸ್ಥಾನಗಳಲ್ಲಿ ಕ್ರೈಸ್ತ ಧರ್ಮ ಹಬ್ಬುತ್ತ ಬಂದರೂ ಅದು ರೋಮ್ ಸಾಮ್ರಾಜ್ಯದ ಅರಸರ ಆಗ್ರಹಕ್ಕೊಳಗಾಗಿ ಬಹು ಕಠಿಣವಾದ ಹಿಂಸೆಗೆ ಗುರಿಯಾಗಬೇಕಾಯಿತು. ಹೀಗೆ ಕೇವಲ ಬಡ ಸಂಸ್ಥೆಯಾಗಿದ್ದ ಕ್ರೈಸ್ತ ಸಭೆ ಮಹಾರೋಮ್ ಸಾಮ್ರಾಜ್ಯದ ಹಿಂಸೆಯನ್ನು ತಾಳಿಕೊಂಡು ಉಳಿದು, ಕ್ರಮೇಣ ರೋಮ್ ಸಾಮ್ರಾಜ್ಯದಲ್ಲೆಲ್ಲ ಹಬ್ಬಿಕೊಂಡದ್ದು ಬಹು ಗಮನಾರ್ಹ ವಿಷಯ.

	ರೋಮ್ ಸಾಮ್ರಾಜ್ಯದ ಅರಸನಾದ ಕಾನ್‍ಸ್ಟಂಟೈನ್ ಎಂಬಾತ ಕ್ರಿ,ಶ.312ರಲ್ಲಿ ಕ್ರೈಸ್ತ ಧರ್ಮ ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಸಾರಿದ್ದು ಈ ಧರ್ಮದ ಮುನ್ನಡೆಯಲ್ಲಿ ಬಹು ದೊಡ್ಡ ಮೈಲಿಗಲ್ಲು. ಇದರ ಫಲವಾಗಿ ಹೆಚ್ಚು ಮಂದಿ ಕ್ರೈಸ್ತ ಧರ್ಮವನ್ನು ಅಂಗೀಕರಿಸಿದ ಕಾರಣ ಯೂರೋಪ್ ಖಂಡದ ಸಂಸ್ಕøತಿಯ ಮೇಲೆ ಕ್ರೈಸ್ತ ತತ್ತ್ವಗಳು ಹೆಚ್ಚಿನ ಪ್ರಭಾವವನ್ನು ಬೀರುತ್ತ ಬಂದವು. ಅಂದಿನಿಂದ ಇಂದಿನ ವರೆಗಿನ ಶತಮಾನಗಳಲ್ಲಿ ಈ ಧರ್ಮ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಪ್ರಚುರಗೊಂಡು ಅಲ್ಲಲ್ಲಿನ ಸಾಂಸ್ಕøತಿಕ ಹಿನ್ನೆಲೆಗಳಿಗೆ ಅನುಸಾರವಾಗಿ ಬೆಳೆಯುತ್ತ ಬಂದಿದೆ.

	ಚಾರಿತ್ರಿಕ ಮತ್ತು ತಾತ್ತ್ವಿಕ ದೃಷ್ಟಿಗಳಿಂದ ಜಾಗತಿಕ ಕ್ರೈಸ್ತ ಸಭೆಯಲ್ಲಿ ಮೂರು ಮುಖ್ಯ ವಿಭಾಗಗಳಿವೆ ಎಂದು ಹೇಳಬಹುದು (i) ರೋಮನ್ ಕೆಥೊಲಿಕ್ ಸಭೆ (ii)ಪೌರಸ್ತ್ಯ ಸಾಂಪ್ರದಾಯಿಕ ಸಭೆ (ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚು) (iii) ಪ್ರಾಟೆಸ್ಟಂಟ್ ಸಭೆ. ಸುಧಾರಣೆಯ ಸ್ವಾತಂತ್ರ್ಯವಹಿಸಿರುವ ಪ್ರಾಟೆಸ್ಟಂಟ್ ಸಭೆಗಳಲ್ಲಿ ಎಷ್ಟೋ ಚಿಕ್ಕ ದೊಡ್ಡ ಶಾಖೆಗಳಿವೆ. ಅಮೆರಿಕದ ಪ್ರಾಟೆಸ್ಟಂಟ್ ಸಭೆಯಲ್ಲಿಯೇ ಸುಮಾರು 255 ಶಾಖೆಗಳಿವೆ. ಈ ಎಲ್ಲ ಸಭೆಗಳು ಜಗತ್ತಿನ ಬೇರೆ ಬೇರೆ ಕಡೆಗಳಿಗೆ ಹೋಗಿ ಸುವಾರ್ತೆಯನ್ನು ಸಾರಿ, ಸಭೆಗಳನ್ನು ಸ್ಥಾಪಿಸಿರುವುದರಿಂದ ಈ ಪಂಗಡಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಹಬ್ಬಿವೆ ಎಂದು ಹೇಳಬಹುದು. ಈ ಮುಖ್ಯ ವಿಭಾಗಗಳಿಗೂ ಪಂಗಡಗಳಿಗೂ ಕ್ರೈಸ್ತ ತತ್ತ್ವದ ತಿರುಳಿನಲ್ಲಿ ಮತ್ತು ಮುಖ್ಯವಾಗಿ ಯೇಸುಕ್ರಿಸ್ತನನ್ನು ಕುರಿತಾದ ನಂಬಿಕೆಯಲ್ಲಿ ಐಕ್ಯಮತ್ಯವಿದ್ದರೂ ಆಡಳಿತ ಕ್ರಮಗಳಲ್ಲಿ, ಸಂಸ್ಕಾರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ಇನ್ನೂ ಕೆಲವು ಮುಖ್ಯ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ.

	(i) ರೋಮನ್ ಕೆಥೊಲಿಕ್ ಸಭೆ: ರೋಮ್ ನಗರದಲ್ಲಿರುವ ಪೋಪನ ಸರ್ವಾಧಿಕಾರವನ್ನು ಮನ್ನಿಸುವ ಈ ಸಭೆಯಲ್ಲಿ ಸುಮಾರು 423 ದಶಲಕ್ಷ ಸದಸ್ಯರಿದ್ದಾರೆ. ಚಾರಿತ್ರಿಕ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಯೂರೋಪ್ ಖಂಡದ ಜನಾಂಗಗಳ ಚರಿತ್ರೆಯ ಮೇಲೂ ಜನಜೀವನದ ಮೇಲೂ ಈ ಸಭೆ ಹೆಚ್ಚಿನ ಪರಿಣಾಮವನ್ನು ಬೀರಿದೆ. ಕೆಥೊಲಿಕ್ ಎಂಬ ಗ್ರೀಕ್ ಪದದ ಮೂಲ ಅರ್ಥ ಸಾರ್ವತ್ರಿಕ ಎಂದು. ಇಗ್ನೇಷಿಯಸ್ ಎಂಬ ಸಭಾಪಿತೃ ಕ್ರಿ.ಶ.115ರಲ್ಲಿ ಬರೆದ ಒಂದು ಪತ್ರದಲ್ಲಿ ಈ ಪದವನ್ನು ಮೊದಲಾಗಿ ಉಪಯೋಗಿಸಿದ, ಆತನ ಅಭಿಪ್ರಾಯದ ಮೇರೆಗೆ ಎಲ್ಲಿ ಕ್ರಿಸ್ತನಿದ್ದಾನೋ ಅಲ್ಲಿ ಸಾರ್ವತ್ರಿಕ ಕ್ರೈಸ್ತ ಸಭೆಯಿದೆ. ಮೊದಲಿನ ಶತಮಾನಗಳಲ್ಲಿ ಕ್ರೈಸ್ತ ಸಭೆ ಇತರ ಧರ್ಮಗಳೊಡನೆಯೂ ರಾಜಕೀಯ ಶಕ್ತಿಗಳೊಡನೆಯೂ ಹೋರಾಡಿ ಪ್ರೌಢಾವಸ್ಥೆಗೆ ಮುಟ್ಟುವ ಅಗತ್ಯವಿತ್ತು. ಅದು ಸಭೆಯ ಸತ್ವಪರೀಕ್ಷೆಯ ಕಾಲ. ತನ್ನ ಸಂದೇಶದ ತಿರುಳನ್ನೂ ಆಡಳಿತ ಕ್ರಮಗಳನ್ನೂ ಈ ಎಲ್ಲ ಭಿನ್ನಾಭಿಪ್ರಾಯಗಳ ಮಧ್ಯದಲ್ಲಿ ಕಾಪಾಡಿಕೊಳ್ಳುವ ಅಗತ್ಯತೆ ಇದ್ದುದರಿಂದಲೇ ಪಾಶ್ಚಾತ್ಯ ರಂಗದಲ್ಲಿ ಕೆಥೊಲಿಕ್ ಸಭೆ ಬೆಳೆದು ಬಂತು. ಈ ಸಭಾ ತತ್ವದಲ್ಲಿ ಮೂರು ಮುಖ್ಯವಾದ ವಿಷಯಗಳು ಅಡಕವಾಗಿವೆ ಎಂದು ಹೇಳಬಹುದು. ರೋಮ್ ನಗರದಲ್ಲಿ ಅಪೋಸಲನಾದ ಪೀಟರ್ ಬಿಷಪ್ಪನಾಗಿದ್ದ ಎಂಬ ಅಭಿಪ್ರಾಯವನ್ನು ಮನ್ನಿಸಿ ಪಾರಂಪರ್ಯವಾಗಿ ಬಂದಿರುವದೆಂದು ತಿಳಿದ ಬಿಷಪರ ಆಡಳಿತದ ಸ್ವೀಕಾರ ಮೊದಲನೆಯದು. ಇದೇ ಕ್ರಮೇಣ ಪೋಪನ ಸ್ಥಾನವನ್ನೂ ಅಧಿಕಾರವನ್ನೂ ಧಾರ್ಮಿಕ ಮಾನ್ಯತೆಯನ್ನೂ ರೂಪಿಸಿ ಬಲಪಡಿಸಿತು. ಎರಡನೆಯದು ಬೈಬಲ್ ಗ್ರಂಥ ಮತ್ತು ಸಭೆಯ ಸಾಂಪ್ರದಾಯಿಕ ಬೋಧನೆಗಳು ಸಭೆಯ ತತ್ವನಿರೂಪಣೆಗೆ ಮೂಲವೂ ಬೋಧನಾ ಶುದ್ಧತೆಗೆ ಪ್ರಮಾಣಗಳೂ ಆಗಿವೆ ಎಂಬ ಸೂತ್ರದ ಸ್ವೀಕಾರ. ಕೊನೆಯದು ಸರ್ವ ಸಭಾಂಗೀಕೃತವಾಗಿದ್ದು ಕ್ರೈಸ್ತ ಬೋಧನೆಯ ಸಾರಾಂಶವನ್ನು ಒಳಗೊಂಡಿರುವ ವಿಶ್ವಾಸ ಪ್ರಮಾಣಗಳು. ಇವುಗಳಲ್ಲಿ ಕ್ರಿ.ಶ 325ರಲ್ಲಿ ಸ್ವೀಕರಿಸಲ್ಪಟ್ಟ ನಿಕೇಯದ ವಿಶ್ವಾಸ ಪ್ರಮಾಣವೂ ಸುಮಾರು ಕ್ರಿ.ಶ.400ರಲ್ಲಿ ರೂಪಿತವಾದ ಅಪೋಸಲರ ವಿಶ್ವಾಸ ಪ್ರಮಾಣವೂ ಮುಖ್ಯವಾದವು.

	ಯೇಸುಕ್ರಿಸ್ತನ ಮಾತೆಯಾದ ಕನ್ಯಾ ಮೇರಿಗೆ ಈ ಸಭೆಯಲ್ಲಿ ಹೆಚ್ಚಿನ ಮನ್ನಣೆಯಿದೆ.

	(ii) ಪೌರಸ್ತ್ಯ ಸಾಂಪ್ರದಾಯಿಕ ಸಭೆ : ಪೌರಸ್ತ್ಯ ದೇಶಗಳಲ್ಲಿ ಅಂದರೆ ಪ್ಯಾಲಸ್ಟೈನ್, ಸಿರಿಯ, ಈಜಿಪ್ಟ್, ಇಥಿಯೋಪಿಯ, ಭಾರತ, ಗ್ರೀಸ್, ರಷ್ಯ ಮೊದಲಾದ ದೇಶಗಳಲ್ಲಿ ಹಬ್ಬಿಕೊಂಡಿರುವ ಈ ಸಭೆಗಳ (ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್) ವಿಷಯವಾಗಿ ಸಾಕಷ್ಟು ತಿಳುವಳಿಕೆ ಪಡೆದುಕೊಳ್ಳುವುದು ಅನೇಕ ಸಲ ಕಷ್ಟವಾಗುತ್ತದೆ. ರೋಮ್ ನಗರದಲ್ಲಿ ಕ್ರೈಸ್ತರು ನೆಲೆಸುವ ಮುಂಚೆಯೇ ಈ ದೇಶಗಳಲ್ಲಿ ಕ್ರೈಸ್ತರೂ ಕ್ರೈಸ್ತ ಸಭೆಗಳೂ ಇದ್ದವೆಂಬುದನ್ನು ಮರೆಯಲಾಗದು. ಪೌರಸ್ತ್ಯ ಸಾಂಪ್ರದಾಯಿಕ ಸಭೆಗೆ ಸಂಬಂಧಿಸಿದಂತೆ ಸುಮಾರು 150 ದಶಲಕ್ಷದ ಕ್ರೈಸ್ತರೂ 35 ಸಾವಿರ ಧರ್ಮಬೋಧಕರೂ 20 ಸಾವಿರ ಚಿಕ್ಕ ಪುಟ್ಟ ಸಭೆಗಳೂ ಇವೆ. ರೋಮ್ ನಗರದಲ್ಲಿ ಕೇಂದ್ರೀಕೃತವಾದ ಪಾಶ್ಚಾತ್ಯ ರೋಮನ್ ಕೆಥೊಲಿಕ್ ಸಭೆಗೂ ಈ ಸಭೆಗಳಿಗೂ ತಾತ್ತ್ವಿಕ, ಭೌಗೋಲಿಕ ಮತ್ತು ಚಾರಿತ್ರಿಕ ದೃಷ್ಟಿಗಳಿಂದ ಭಿನ್ನಾಭಿಪ್ರಾಯಗಳು ಹುಟ್ಟಿ ಕೊನೆಗೆ 1054ರಲ್ಲಿ ಇವು ರೋಮ್ ಸಭೆಯಿಂದ ಬೇರ್ಪಟ್ಟು ಅಂದಿನಿಂದ ಇಂದಿನವರೆಗೂ ಹಾಗೆಯೇ ಉಳಿದಿವೆ. ಪ್ರಭುಭೋಜನದ ವಿವರಣೆಗೆ ಇವರ ಆರಾಧನೆಯಲ್ಲಿ ಹೆಚ್ಚಿನ ಪ್ರಾಮುಖ್ಯ ಇದೆ. ಇವರು ವಿಗ್ರಹಗಳನ್ನು ನಿರಾಕರಿಸಿ ಶಿಲುಬೆಯನ್ನು ಮಾತ್ರ ಸ್ವೀಕರಿಸಿದ್ದಾರೆ. ರೋಮನ್ ಕೆಥೊಲಿಕ್ ಸಭೆ ಏಳು ಸಂಸ್ಕಾರಗಳನ್ನೂ (ಸ್ಯಾಕ್ರಮೆಂಟ್ಸ್) ಪ್ರಾಟಿಸ್ಟಂಟರು ಎರಡು ಸಂಸ್ಕಾರಗಳನ್ನೂ ಒಪ್ಪಿಕೊಳ್ಳುವಾಗ ಇವರು ಐದು ಸಂಸ್ಕಾರಗಳನ್ನೂ ಸ್ವೀಕರಿಸುತ್ತಾರೆ. ಬೇರೆ ಬೇರೆ ದೇಶಗಳಿಗೆ ಹೋಗಿ ಸುವಾರ್ತಾ ಪ್ರಸಾರ ಮಾಡುವ ಕೆಲಸಕ್ಕೆ ಇವರು ಹೆಚ್ಚಿನ ಗಮನಕೊಟ್ಟಿಲ್ಲ. ಹೀಗಿದ್ದರೂ ದಕ್ಷಿಣ ಭಾರತಕ್ಕೆ ಸುವಾರ್ತೆಯನ್ನು ತಂದು ಕೇರಳದ ಕ್ರೈಸ್ತ ಸಭಾ ಸ್ಥಾಪನೆಗೆ ಇವರು ಕಾರಣರಾದರು ಎಂಬುದನ್ನು ಮರೆಯುವಂತಿಲ್ಲ.

	(iii). ಪ್ರಾಟೆಸ್ಟಂಟ್ ಸಭೆಗಳು : ಈ ಸಭೆಗಳ ಮೂಲಪಿತೃ ಜರ್ಮನಿ ದೇಶದಲ್ಲಿ ಕ್ರೈಸ್ತ ಮತಸುಧಾರಣೆಯನ್ನು ಆರಂಭಿಸಿದ ಮಾರ್ಟಿನ್ ಲೂಥರ್ (1443-1546). ಈತ ಬಹು ಧೈರ್ಯದಿಂದ ಸಾರಿದ ಧಾರ್ಮಿಕ ಸ್ವಾತಂತ್ರ್ಯದ ಚಳವಳಿ ಬಹುಬೇಗ ಯೂರೋಪು ಖಂಡದಲ್ಲಿ ಮಾತ್ರವೇ ಅಲ್ಲ, ಇತರ ದೇಶಗಳಲ್ಲೂ ಹರಡಿತು. ಲೂಥರ್ ಮೊದಲು ರೋಮನ್ ಕೆಥೊಲಿಕ್ ಸಭೆಯಲ್ಲೇ ಸಂನ್ಯಾಸಿಯಾಗಿದ್ದು, ದೇಹದಂಡನೆಯಿಂದಲೂ ಆಳವಾದ ಧ್ಯಾನ, ಅಭ್ಯಾಸಗಳಿಂದಲೂ ಆತ್ಮಶಾಂತಿಯನ್ನು ದೊರಕಿಸಿಕೊಳ್ಳಲು ಬಹುನಿಷ್ಠೆಯಿಂದ ಪ್ರಯತ್ನಿಸುತ್ತಿದ್ದ. ಸ್ವಲ್ಪ ಸಮಯ ಜರ್ಮನಿಯ ಒಂದು ವಿಶ್ವವಿದ್ಯಾನಿಲಯದಲ್ಲಿ ಮತಧರ್ಮ ಶಾಸ್ತ್ರದ ಪ್ರಾಧ್ಯಾಪಕನೂ ಆಗಿದ್ದ. ಮನಸ್ಸಿಗೆ ಶಾಂತಿ ದೊರಕದೆ ಹೆಚ್ಚಿನ ಒಳತೋಟಿಗೆ ಗುರಿಯಾಗಿ ಕಾಲಕ್ರಮೇಣ ಸತ್ಯವನ್ನು ಕಂಡುಕೊಂಡ. ದೇಹದಂಡನೆಯಿಂದ, ವೈದಿಕ ಆಚಾರಗಳಿಂದ ಅಥವಾ ಕೇವಲ ಕರ್ಮಮಾರ್ಗದಿಂದ ಉಪಶಾಂತಿ ಒದಗುವುದಿಲ್ಲ. ಅದು ದೃಢವಿಶ್ವಾಸ ಹೊಂದಿದವನಿಗೆ ಮಾತ್ರ ಯೇಸುಕ್ರಿಸ್ತನ ಮೂಲಕ ದೊರಕುವ ವರಪ್ರಸಾದವದು-ಎಂಬ ಆಳವಾದ ಅನುಭಾವ ಇವನಿಗೆ ಉಂಟಾಯಿತು. ತನ್ನ ನಂಬಿಕೆಗೆ ಆಧಾರಗಳನ್ನೀತ ಸಂತ ಆಗಸ್ಟೀನ್ ಮತ್ತು ಸಂತ ಪಾಲರಲ್ಲಿ ಕಂಡುಕೊಂಡ.

	ಪ್ರಾಟೆಸ್ಟಂಟ್ ಸಭೆಗಳ ಅಸ್ತತ್ವಕ್ಕೆ ಕಾರಣನಾದ ಲೂಥರ್ ನಿರೂಪಿಸಿದ ಮುಖ್ಯ ಸೂತ್ರಗಳನ್ನು ಹೀಗೆ ಸಂಕ್ಷೇಪವಾಗಿ ಹೇಳಬಹುದು. ಕ್ರಿಸ್ತನ ಬೋಧನೆಗೂ ಜೀವಿತಕ್ಕೂ ಬೈಬಲ್ ಅಲ್ಲದೆ ಬೇರೆ ಯಾವ ಮೂಲವಾಗಲೀ ಆಧಾರವಾಗಲೀ ಇಲ್ಲ. ದೇವರ ವಾಕ್ಯವಾದ ಬೈಬಲ್ಲಿಗೆ ವಿರೋಧವಾಗಿ ಹೋಗುವ ಯಾವ ವಿಷಯಗಳನ್ನೂ ಸ್ವೀಕರಿಸಲಾಗದು. ಪಾಪಿಮಾನವನಿಗೆ ರಕ್ಷಣೆ ದೊರಕುವುದು ಪುಣ್ಯಕಾರ್ಯಗಳಿಂದಲ್ಲ, ಕೇವಲ ಭಕ್ತಿಯಿಂದಲೇ. ಒಳ್ಳೇ ಕೃತ್ಯಗಳು ಅಥವಾ ನೈತಿಕ ಸೂತ್ರಗಳು ಭಕ್ತಿವಿಶ್ವಾಸಗಳ ಫಲಗಳೇ ಹೊರತು, ತಾವಾಗಿ ಅವನ್ನು ಹುಟ್ಟಿಸುವಂಥವಲ್ಲ. ದೇವ ಕೃಪಾಸಾಧನಗಳಾದ ದೀಕ್ಷಾಸ್ನಾನ ಮತ್ತು ಪ್ರಭುಭೋಜನ ಎಂಬ ಎರಡು ಸಂಸ್ಕಾರಗಳು ಮಾತ್ರ ಸ್ವೀಕಾರಾರ್ಹ.

	ಲೂಥರನ ಆದ್ಯ ಉದ್ದೇಶ ಸಭೆಯನ್ನು ಶುದ್ಧೀಕರಿಸಿ ಪುನರುಜ್ಜೀವನಗೊಳಿಸುವುದೇ ಹೊರತು ಸಭೆಯ ಐಕ್ಯತೆಯನ್ನು ಭಂಗಪಡಿಸುವದಾಗಿರಲಿಲ್ಲ. ಆದರೆ ಆತನ ಬೋಧನೆಯ ಫಲವಾಗಿ ಸಾರ್ವತ್ರಿಕ ಸಭೆಯಲ್ಲಿ ಇನ್ನೊಂದು ವಿಭಾಗ ಅಸ್ತಿತ್ವಕ್ಕೆ ಬಂತು. ಜಗತ್ತಿನ ದೇಶಗಳಲ್ಲೆಲ್ಲ ಪರಿಣಾಮಕಾರಿಯಾದ ಈ ಧಾರ್ಮಿಕ ಸುಧಾರಣೆ ಈ ಒಬ್ಬ ವ್ಯಕ್ತಿಯಿಂದಲೇ ಆಯಿತೆಂದು ಹೇಳಲಿಕ್ಕೆ ಆಗುವುದಿಲ್ಲ. ಲೂಥರನ ನಂಬಿಕೆ, ವಾಕ್ಚಾತುರ್ಯ, ದೇವರ ಮೇಲಿನ ಭರವಸೆ, ಧೈರ್ಯ, ಇವನ್ನು ಗಮನಿಸುವುದು ಅಗತ್ಯವಾದರೂ ಸುಧಾರಣೆ ಮುಂದುವರಿಯಲು ಇತರ ವಿಷಯಗಳೂ ಸಹಾಯಕವಾದುವು. ಆ ಸಮಯದಲ್ಲಿದ್ದ ರೋಮ್ ಸಭೆಯ ಕೀಳ್ಮಟ್ಟ, ಆಧ್ಯಾತ್ಮಿಕ ವಿಷಯಗಳನ್ನು ಬದಿಗೊತ್ತಿದ್ದ ಲೌಕಿಕತ್ವ., ಪೋಪನ ಅಧಿಕಾರಕ್ಕೆ ಒಳಗಾಗಲು ಅಂತರ್ಯದಲ್ಲಿ ಒಪ್ಪದಿದ್ದ ರಾಜಕೀಯ ಮುಂದಾಳುಗಳ ಮನೋಭಾವನೆ, ಯೂರೋಪಿನ ಜನಾಂಗಗಳೊಳಗಿದ್ದ ಪರಸ್ಪರ ಸ್ಪರ್ಧೆ-ಇವೆಲ್ಲವುಗಳ ಫಲವಾಗಿ ದೇಶ ದೇಶಗಳಲ್ಲಿ ಪ್ರಾಟೆಸ್ಟಂಟ್ ಸಭೆಗಳು ಬಲವಾಗುತ್ತ ಬಂದುವು. ಕ್ಯಾಲ್ವಿನ್, ಜ್ವಿಂಗ್ಲಿ, ನಾಕ್ಸ್, ವೆಸ್ಲಿ-ಮೊದಲಾದ ಮುಂದಾಳುಗಳು ಲೂಥರನ ಸೂತ್ರಗಳನ್ನು ತಮ್ಮ ದೇಶಗಳ ಚಾರಿತ್ರಿಕ ಮತ್ತು ಸಾಂಸ್ಕøತಿಕ ಹಿನ್ನೆಲೆಗಳಿಗೆ ಅನುಸಾರವಾಗಿ ರೂಪಿಸುತ್ತ ಬಂದರು. ಜರ್ಮನಿಯಲ್ಲಿ ಲೂಥರನ ಸಭೆ, ಸ್ವಿಟ್ಜರ್‍ಲೆಂಡ್‍ನಲ್ಲಿ ಪ್ರೆಸ್ಬಿಟೇರಿಯನ್ ಸಭೆ, ಇಂಗ್ಲೆಂಡಿನಲ್ಲಿ ಆಂಗ್ಲಿಕನ್ ಸಭೆ, ಮತ್ತು ಮುಂದಿನ ಶತಮಾನಗಳಲ್ಲಿ ಇಂಥ ಎಷ್ಟೋ ಇತರ ಪ್ರಾಟೆಸ್ಟಂಟ್ ಸಭೆಗಳು ಅಸ್ತಿತ್ವಕ್ಕೆ ಬಂದುವು.

	ಈ ಚಳವಳಿಯಿಂದ ಎಚ್ಚೆತ್ತ ರೋಮನ್ ಕೆಥೊಲಿಕ್ ಸಭೆ ಸ್ವಸುಧಾರಣೆಗಾಗಿ ಪ್ರಯತ್ನಗಳನ್ನು ಮಾಡದೆ ಬಿಡಲಿಲ್ಲ. ಟ್ರೆಂಟಿನ ಸಮಿತಿ (1545-64) ಸುಮಾರು 18 ವರ್ಷಗಳ ಕಾಲ ಅನೇಕ ರೀತಿಗಳಲ್ಲಿ ಕೆಥೊಲಿಕ್ ತತ್ತ್ವವನ್ನೂ ಜೀವನವನ್ನೂ ಸುಧಾರಿಸಲು ಪ್ರಯತ್ನಿಸಿತು. ಮುಖ್ಯವಾಗಿ ಲಯೋಲದ ಇಗ್ನೇಷಿಯಸನಿಂದ ಸ್ಥಾಪಿತವಾದ ಯೇಸು ಪಂಥ ತನ್ನ ಸಂಘಟನಾ ಶಕ್ತಿಯಿಂದಲೂ ಶ್ರೇಷ್ಠ ಧ್ಯೇಯಗಳಿಂದಲೂ ಸಮರ್ಥ ಕಾರ್ಯಗಳಿಂದಲೂ ಕಟ್ಟುನಿಟ್ಟಾದ ಶಿಕ್ಷಣದಿಂದಲೂ ಮುಖ್ಯವಾದ ವಿದ್ಯಾಸಂಸ್ಥೆಗಳ ಮೂಲಕ ಈಗಲೂ ಕೆಲಸ ಮಾಡುತ್ತದೆ.

	ಆಧುನಿಕ ಕಾಲ: ಕ್ರೈಸ್ತ ಸಭೆಯ ಚರಿತ್ರೆಯನ್ನು ವಿಚಾರ ಮಾಡುವಾಗ ಅದರ ಜಾಗತಿಕ ವಿಸ್ತಾರಕ್ಕೆ ಕಾರಣವಾದ ಧರ್ಮಪ್ರಚಾರ ಮಂಡಲಿಗಳನ್ನು ಮರೆಯಲು ಸಾಧ್ಯವಿಲ್ಲ. ತಮ್ಮ ಧಾರ್ಮಿಕ ಪುನರುಜ್ಜೀವನದೊಡನೆ ಕ್ರೈಸ್ತ ಸಂದೇಶವನ್ನು ಇತರ ದೇಶಗಳ ಜನರಿಗೂ ಸಾರಿ ಹೇಳಿ ಅಲ್ಲೂ ಸಭೆಗಳನ್ನು ಸ್ಥಾಪಿಸಬೇಕೆಂಬ ಆಕಾಂಕ್ಷೆ ಎಷ್ಟೋ ಕ್ರೈಸ್ತರಲ್ಲಿ ಮೂಡಿಬಂತು. ಪರಿಣಾಮವಾಗಿ 1706ರಲ್ಲಿ ದಕ್ಷಿಣ ಭಾರತದ ಟ್ರಾಂಕ್ವೆಬಾರ್ ಎಂಬಲ್ಲಿ ಡೆನ್ಮಾರ್ಕ್ ದೇಶದ ಅರಸನ ಆಶ್ರಯ ಪಡೆದ ಕೆಲವು ಪ್ರಚಾರಕರು ಭಾರತಕ್ಕೆ ಬಂದಿಳಿದರು. 1813ರಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿಯವರು ತಮ್ಮ ಪ್ರಚಾರಕರು ಈ ದೇಶಕ್ಕೆ ಬಂದು ಸೇವೆ ಮಾಡಲು ಅನುಮತಿಕೊಟ್ಟರು. ಕಲ್ಕತ್ತದ ಪಕ್ಕದಲ್ಲಿರುವ ಈ ದೇಶಕ್ಕೆ ಬಂದು ಸೇವೆ ಮಾಡಲು ಅನುಮತಿಕೊಟ್ಟರು. ಕಲ್ಕತ್ತದ ಪಕ್ಕದಲ್ಲಿರುವ ಸೆರಾಂಪೂರ್‍ನಲ್ಲಿ ಬಹು ಪರಿಣಾಮಕಾರಿಯಾಗಿ ಕ್ರೈಸ್ತ ಸೇವೆ ನಡೆಸಿದ ಪ್ರಸಿದ್ಧ ಭಕ್ತ ವಿಲಿಯಂ ಕ್ಯಾರಿ (ನೋಡಿ- ಕ್ಯಾರಿ,-ವಿಲಿಯಂ). ಇದೇ ರೀತಿಯಲ್ಲಿ ಬೇರೆ ಬೇರೆ ಸಭೆಗಳಿಗೆ ಸೇರಿದ ಪ್ರಚಾರ ಸಂಸ್ಥೆಗಳು ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ತಮ್ಮ ಕೆಲಸವನ್ನಾರಂಭಿಸಿದ್ದರಿಂದ ಆ ದೇಶಗಳಲ್ಲೂ ಕ್ರೈಸ್ತ ಸಭೆಗಳು ಹುಟ್ಟಿ ಬೆಳೆದಿವೆ. ಅಷ್ಟೇ ಅಲ್ಲ, ಎಷ್ಟೋ ವಿದ್ಯಾಸಂಸ್ಥೆಗಳೂ ಆಸ್ಪತ್ರೆಗಳೂ ಇತರ ಸೇವಾ ಕೇಂದ್ರಗಳೂ ಕ್ರಿಸ್ತನ ಸಂದೇಶವನ್ನು ಪ್ರಚುರ ಪಡಿಸಲು ಪ್ರಯತ್ನಿಸುತ್ತಿವೆ.

	ಕ್ರೈಸ್ತ ಸಭೆಗಳು ಹರಿದು ಹಂಚಿ ಹೋಗಿರುವುದು ಸರಿಯಲ್ಲ, ಕ್ರೈಸ್ತ ಸಭೆಯ ಆದರ್ಶ ಜೀವನಕ್ಕೂ ಪರಿಣಾಮಕಾರಿ ಸೇವೆಗೂ ಸಭೆ ಸಭೆಗಳ ನಡುವೆ ಐಕ್ಯತೆ ಅಗತ್ಯವಾಗಿದೆ- ಎಂಬ ಅರಿವು 19ನೆಯ ಶತಮಾನದಲ್ಲೇ ಅನೇಕರನ್ನು ಎಚ್ಚರಿಸಿತ್ತು. ಕ್ರಮೇಣ ಸಭಾ ಸಂಘಟನ ಚಳವಳಿಗಳು ಆಯಾ ದೇಶಗಳಲ್ಲಿ ಹುಟ್ಟಿಕೊಂಡುವು. ಭಾರತದಲ್ಲಿ ಅನೇಕ ವರ್ಷಗಳ ಕೆಲಸದ ಪರಿಣಾಮವಾಗಿ 1947ರಲ್ಲಿ ದಕ್ಷಿಣ ಭಾರತ ಸಭೆ ಅಸ್ತಿತ್ವಕ್ಕೆ ಬಂತು. ಪಾಶ್ಚಾತ್ಯ ದೇಶಗಳಲ್ಲೂ ಕಷ್ಟಸಾಧ್ಯವಾಗಿ ತೋರಿದ ಈ ಪ್ರಯತ್ನ ಭಾರತದಲ್ಲಿ ಸುಲಭವಾಗಿ ಕೈಗೂಡಿತು. ಐಕ್ಯಗೊಂಡ ಈ ಸಭೆಯಲ್ಲಿ ಐದು ಪ್ರಾಟೆಸ್ಟಂಟ್ ಸಭೆಗಳಿಗೆ ಸೇರಿದ ಸುಮಾರು ಒಂದು ದಶಲಕ್ಷ ಕ್ರೈಸ್ತರು ಒಂದಾಗಿ ಕ್ರಿಸ್ತನಲ್ಲಿ ತಮಗಿರುವ ಪರಸ್ಪರ ಅನ್ಯೋನ್ಯತೆಗೆ ಕಾರ್ಯತಃ ಸಾಕ್ಷಿ ಕೊಡುವವರಾಗಿದ್ದಾರೆ. ಇದೇ ಐಕ್ಯದ ದಾರಿಯಲ್ಲಿ ಶ್ರೀಲಂಕದ, ಉತ್ತರ ಹಿಂದೂಸ್ತಾನದ ಮತ್ತು ಆಫ್ರಿಕದ ಸಭೆಗಳೂ ಮುನ್ನಡೆಯುವ ನಿರೀಕ್ಷೆಯಿದೆ.

	ಜಾಗತಿಕ ಐಕ್ಯತಾ ಚಳವಳಿಯೊಂದು ಇಡೀ ಜಗತ್ತಿನಲ್ಲಿರುವ ಕ್ರೈಸ್ತಸಭೆಗಳನ್ನು ಕಾಲಕ್ರಮೇಣ ಒಂದುಗೂಡಿಸಲು ಪ್ರಯತ್ನಿಸುತ್ತಿದೆ. ಸಾರ್ವತ್ರಿಕ ಕ್ರೈಸ್ತ ಸಭಾಮಂಡಲಿಯ ಮೊದಲನೆಯ ಮಹಾಕೂಟ 1948ರಲ್ಲಿ ಆಮ್ಸ್‍ಟರ್‍ಡ್ಯಾಮ್‍ನಲ್ಲೂ ಇನ್ನೊಂದು ಮಹಾಕೂಟ 1961ರ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ನವದೆಹಲಿಯಲ್ಲೂ ಜರುಗಿದುವು.

	ಕ್ರೈಸ್ತಧರ್ಮದ ತಿರುಳು : ಜಗತ್ತಿನಲ್ಲಿರುವ ಕ್ರೈಸ್ತಸಭೆಗಳೆಲ್ಲ ಸರ್ವಸಾಧಾರಣವಾಗಿ ಕ್ರೈಸ್ತತತ್ತ್ವದಲ್ಲಿ ಕೆಲವು ಮುಖ್ಯ ವಿಷಯಗಳನ್ನು ಐಕ್ಯಮತದಿಂದ ಸ್ವೀಕರಿಸಿದರೂ ಅವನ್ನು ನಿರೂಪಿಸುವ ರೀತಿಯಲ್ಲಿ ಅನೇಕ ವೇಳೆ ಭಿನ್ನಾಭಿಪ್ರಾಯಗಳು ಕಂಡು ಬರುತ್ತವೆ. ಆದರೂ ಬೈಬಲ್ ಗ್ರಂಥ, ವಿಶ್ವಾಸ ಪ್ರಮಾಣಗಳು, ಸಭೆಯ ಸಾಮೂಹಿಕ ಆರಾಧನೆ, ಜಗತ್ತಿನಲ್ಲಿ ಕ್ರೈಸ್ತಸಭೆಗಿರುವ ಕರ್ತವ್ಯ ಮತ್ತು ಸ್ಥಾನ-ಇವುಗಳ ವಿಷಯದಲ್ಲಿ ಬಹುಮಟ್ಟಿನ ಸಭೆಯವರು ತಕ್ಕಮಟ್ಟಿಗೆ ಒಮ್ಮತದಿಂದಿದ್ದಾರೆಂದು ಹೇಳಬಹುದು. ಸಾಧಾರಣವಾಗಿ ಅಪೋಸಲರ ಉಪದೇಶಗಳು ಕ್ರೈಸ್ತಸಭೆಯ ನಂಬಿಕೆಗಳನ್ನು ಸಂಕ್ಷಿಪ್ತರೀತಿಯಲ್ಲಿ ನಿರೂಪಿಸುತ್ತವೆಂದು ಹೇಳಬಹುದು. ಅವುಗಳ ಸಾರಾಂಶ ಹೀಗಿದೆ :

	`ವಿಶ್ವಸೃಷ್ಟಿಕರ್ತನಾದ, ಸರ್ವಶಕ್ತನಾದ, ತಂದೆಯಾದ ದೇವರನ್ನು ನಂಬುತ್ತೇನೆ. ಆತನ ಕುಮಾರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತನನ್ನು ನಂಬುತ್ತೇನೆ. ಈತ ಪರಿಶುದ್ಧಾತ್ಮನಿಂದ ಕನ್ಯೆ ಮೇರಿಯ ಗರ್ಭದಲ್ಲಿ ಧರಿಸಲ್ಪಟ್ಟು, ಆಕೆಯಲ್ಲಿ ಹುಟ್ಟಿ ಪೋಂಟಿಯಸ್ ಪೈಲಟ್‍ನ ಕಾಲದಲ್ಲಿ ಬೆಳೆದು, ಶಿಲುಬೆಗೆ ಆಹುತಿಯಾಗಿ, ಸಮಾಧಿಹೊಂದಿ ಪಾತಾಳಕ್ಕೆ ಇಳಿದುಹೋಗಿ, ಮೂರನೆಯ ದಿನ ಎದ್ದು ಬಂದ. ಪರಲೋಕಕ್ಕೆ ಏರಿ ಹೋಗಿ ಅಲ್ಲಿ ತಂದೆಯಾದ ದೇವರ ಬಲಪಾಶ್ರ್ವದಲ್ಲಿ ಕುಳಿತುಕೊಂಡ. ಅಲ್ಲಿಂದ ತಿರುಗಿ ಬಂದು ಬದುಕಿರುವವರಿಗೂ ಸತ್ತವರಿಗೂ ನ್ಯಾಯ ತೀರ್ಪು ನಡೆಸುತ್ತಲಿದ್ದಾನೆ-ಎಂಬುದನ್ನು ನಂಬುತ್ತೇನೆ.

	`ಪರಿಶುದ್ಧಾತ್ಮರನ್ನು ನಂಬುತ್ತೇನೆ. ಒಂದೇ ಪರಿಶುದ್ಧ ಕ್ರೈಸ್ತಸಭೆಯೂ ಭಕ್ತರ ಅನ್ಯೋನ್ಯತೆಯೂ ಪಾಪದ ಪರಿಹಾರವೂ ದೇಹದ ಪುನರುತ್ಥಾನವೂ ನಿತ್ಯಜೀವವೂ ಉಂಟು ಎಂಬುದನ್ನು ನಂಬುತ್ತೇನೆ.

	ಕ್ರೈಸ್ತಸಭೆ ಅಂಗೀಕರಿಸುವ ಕೆಲವು ಮುಖ್ಯ ತತ್ತ್ವಗಳ ಸಾರಾಂಶವಿದು: ಯೇಸುಕ್ರಿಸ್ತನೇ ಕ್ರೈಸ್ತಧರ್ಮದ ತಿರುಳೆಂದು ತಿಳಿಯಬೇಕು. ಕ್ರಿಸ್ತನಿಲ್ಲದಿದ್ದರೆ ಕ್ರೈಸ್ತ ಧರ್ಮವೇ ಇಲ್ಲ. ಈ ಯೇಸುಕ್ರಿಸ್ತ ದೇವಕುಮಾರನೂ ಮಾನವರಕ್ಷಕನೂ ಆಗಿರುವುದರಿಂದ ದೇವರ ಪ್ರೀತಿಯನ್ನು ತನ್ನ ಚರಿತ್ರೆಯಲ್ಲಿ ಪ್ರಕಟ ಮಾಡುವುದಲ್ಲದೆ ಪಾಪಿಮಾನವನ ರಕ್ಷಣೆಯನ್ನು ಸಾಧಿಸಿ ದೇವ ಮಾನವ ಸಂಧಾನವನ್ನು ಮಾಡಿದ ಕರ್ತನಾಗಿದ್ದಾನೆ-ಎಂಬುದು ಕ್ರೈಸ್ತ ಸಂದೇಶದ ಮುಖ್ಯ ಪಾಠ. ಕ್ರಿಸ್ತನೆಂಬ ಅಸ್ಥಿಭಾರದ ಮೇಲೆ ಕ್ರೈಸ್ತಸಭೆ ನಿಂತಿದೆ. ಸಭೆ ದೇವರ ಆಲಯವೂ ತನ್ನ ಶಿರಸ್ಸಾಗಿರುವ ಯೇಸುಕ್ರಿಸ್ತನ ಉದ್ದೇಶವನ್ನು ಸಾಧಿಸುವ ದೇಹವೂ ಆಗಿದೆ. `ಸಮಾಧಾನವನ್ನು ಸಂಪಾದಿಸಿ ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಆಸಕ್ತರಾಗಿರಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು. ಒಬ್ಬನೇ ಆತ್ಮನನ್ನು ಹೊಂದಿರುವವರು, ಒಂದೇ ಪದವಿಯನ್ನು ನಿರೀಕ್ಷಿಸುವುದಕ್ಕೆ ಕರೆಯಲ್ಪಟ್ಟವರು. ನಿಮ್ಮೆಲ್ಲರಿಗೆ ಕರ್ತ ಒಬ್ಬನೇ, ಭರವಸೆ ಒಂದೇ, ಸ್ನಾನದೀಕ್ಷೆ ಒಂದೇ, ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತ ಎಲ್ಲರ ಮೇಲಿರುವವನೂ ಎಲ್ಲರ ಮುಖಾಂತರ ಕಾರ್ಯ ನಡೆಸುವವನೂ ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.' ಕ್ರಿಸ್ತಯೇಸುವಿಗೂ ತಂದೆ ದೇವರಿಗೂ ಪವಿತ್ರಾತ್ಮನಿಗೂ ಇರುವ ಸಂಬಂಧವನ್ನು ಸ್ಪಷ್ಟ ಪಡಿಸುವ ತತ್ತ್ವ ನಿರೂಪಣೆಯ ಫಲವಾಗಿ ತ್ರಿತ್ವಸಿದ್ಧಾಂತದ ಬಳಕೆಗೆ ಬಂತು. `ತಂದೆಯಾದ ದೇವರು ಸೃಷ್ಟಿಕರ್ತ. ಆತನ ಪ್ರೀತಿಯೇ ನಮಗೆ ಆಧಾರ. ಯೇಸುಕ್ರಿಸ್ತನೇ ಅವತಾರವೆತ್ತಿ ಬಂದಿರುವ ದೇವಕುಮಾರ. ಆತನೊಬ್ಬನೇ ನಮಗೆ ರಕ್ಷಕ. ಪವಿತ್ರಾತ್ಮನ ಶುದ್ಧೀಕರಣದ ಕೆಲಸದ ಮೂಲಕ ನಾವು ಕ್ರೈಸ್ತರಾಗಿ ಬಾಳುತ್ತೇವೆ. ಈ ನಂಬಿಕೆಯ ಆಧಾರದ ಮೇಲೆ ಕ್ರೈಸ್ತರು ತಂದೆ, ಮಗ, ಪರಿಶುದ್ಧಾತ್ಮರಿಂದ ಕೂಡಿದ ತ್ರಿಮೂರ್ತಿ ದೇವರನ್ನು ಆರಾಧಿಸುತ್ತಾರೆ.

	ಮಾನವ ಸ್ವಭಾವ, ಲಕ್ಷಣ, ರಕ್ಷಣಾಮಾರ್ಗ, ಮತ್ತು ಜೀವನದ ಉದ್ದೇಶ-ಇವನ್ನು ಕುರಿತು ಕೂಡ ಕೆಲವು ವಿಷಯಗಳು ಕ್ರೈಸ್ತಸಭೆಯಿಂದ ಅಂಗೀಕೃತವಾಗಿವೆ. ಮಾನವ ದೇವರ ರೂಪವನ್ನು ಹೊಂದಿದ್ದರೂ ತನ್ನ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇವರಿಗೆ ಅವಿಧೇಯನಾಗಿ ಪಾಪದ ಬಂಧನದಲ್ಲಿ ಸಿಕ್ಕಿಬಿದ್ದು ಅದರಿಂದ ತನ್ನನ್ನು ರಕ್ಷಿಸಿಕೊಳ್ಳಲಾರದೆ ತೊಳಲುತ್ತಾನೆ. ಸ್ವಪ್ರಯತ್ನದಿಂದ ಅಂಥ ರಕ್ಷಣೆ ಅಸಾಧ್ಯವಾಗಿರುವುದರಿಂದ ಯೇಸುಕ್ರೈಸ್ತ ತಾನೇ ತನ್ನ ಮರಣದ ಮೂಲಕ ಪಾಪಕ್ಷಮೆಯನ್ನು ಒದಗಿಸಿಕೊಟ್ಟು ಮಾನವ ದೇವತ್ವವನ್ನು ಪಡೆಯಲು ಸಹಾಯ ಮಾಡಿದ್ದಾನೆ. ಪಾಪಕ್ಷಮೆಯ ಸಂದೇಶ ಕ್ರೈಸ್ತಸಭೆಯ ಸುವಾರ್ತಾ ಪ್ರಸರಣೆಯ ತಿರುಳು ಎಂದು ಹೇಳಿದರೆ ತಪ್ಪಾಗಲಾರದು. `ಕ್ಷೇಮದಿಂದಿರುವವರಿಗೆ ವೈದ್ಯ ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು-ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು ಎಂಬ ಕ್ರಿಸ್ತ ಸಂದೇಶ ಅವನ ಬೋಧನೆ ಎಲ್ಲದರ ಸಾರವಾಗಿದೆ.

	ಸಿನೈ ಬೆಟ್ಟದ ಮೇಲೆ ದೇವರು ಸಂತ ಮೋಸಸ್‍ಗೆ ಕೃಪೆಮಾಡಿದ ದಶ ದೈವಾಜ್ಞೆಗಳ ಪ್ರಸ್ತಾಪ ಬೈಬಲಿನಲ್ಲಿ ಬರುತ್ತದೆ. ಈ ಹತ್ತು ಕಟ್ಟಳೆಗಳು ಜೂಡಾಯಿಸಂಗೂ ಕ್ರೈಸ್ತಧರ್ಮಕ್ಕೂ ಇಸ್ಲಾಂ ಧರ್ಮಕ್ಕೂ ತಳಹದಿಯಾಗಿವೆಯಲ್ಲದೆ ವಿಶ್ವದ ಎಲ್ಲ ಧರ್ಮಗಳ ಪಲ್ಲವಿಗಳಾಗಿವೆ. ಇವುಗಳ ಕ್ರಮದಲ್ಲೂ ವ್ಯಾಖ್ಯಾನದಲ್ಲೂ ಏಕಮತವಿಲ್ಲವಾದರೂ ಸ್ಥೂಲವಾಗಿ ಇವನ್ನು ಹೀಗೆ ಗ್ರಹಿಸಬಹುದು; ದೇವರ ಹೆಸರನ್ನು ಯಾರೂ ಅಪವಿತ್ರಗೊಳಿಸಬಾರದು. ಅಂದರೆ ಒಬ್ಬನೇ ದೈವವೆಂದು ತಿಳಿದು ಅವನನ್ನು ಆರಾಧಿಸಬೇಕು. ವಿಗ್ರಹಾರಾಧನೆ ಸಲ್ಲದು; ಸಬ್ಬತು (Sಚಿbbಚಿಣh) ದಿನವನ್ನು ಆಚರಿಸಬೇಕು; ಮಾತಾಪಿತೃಗಳನ್ನು ಗೌರವದಿಂದ ಕಾಣಬೇಕು; ಕೊಲ್ಲಬಾರದು; ವಿಷಯಾಸಕ್ತಿಗಳಿಗೆ ಆಸ್ಪದಕೊಡಬಾರದು; ಕಳಬಾರದು; ಸುಳ್ಳುಸಾಕ್ಷಿ ಹೇಳಬಾರದು; ಪರಸ್ತ್ರೀಗೂ ಪರಧನಕ್ಕೂ ಆಶಿಸಬಾರದು.

	ಬಹುಮಟ್ಟಿಗೆ ಇದು ಕ್ರೈಸ್ತಮತದ ತಿರುಳಾಗಿದೆ.

	ದೇವರು ಕ್ರಿಸ್ತನ ಮೂಲಕ ನಡೆಸುವ ರಕ್ಷಣಾ ಕಾರ್ಯಕ್ಕಾಗಿ ಕ್ರೈಸ್ತಸಭೆ ಅಸ್ತಿತ್ವಕ್ಕೆ ಬಂದಿದೆ. ರಕ್ಷಣೆ ಎಂಬುದು ಕೇವಲ ವೃತ್ತಿಪರವಾದುದಲ್ಲ. ಸಾಮಾಜಿಕವಾದುದು. ಈ ಕಾರಣ ಕ್ರೈಸ್ತಸಭಾಜೀವನ ಕ್ರೈಸ್ತಧರ್ಮಕ್ಕೆ ಅಗತ್ಯ. ಸಭೆ ಎಂಬುದು ಕ್ರಿಸ್ತನ ಮೂಲಕ ದೇವರ ಆರಾಧನೆಯನ್ನೂ ಸೇವೆಯನ್ನೂ ಮಾಡುವುದಕ್ಕಾಗಿ ಕರೆಯಲ್ಪಟ್ಟಿರುವ ಅನ್ಯೋನ್ಯ ಸಂಘ. ಈ ಸಭೆಯ ಅನ್ಯೋನ್ಯತೆಗೆ ಬೇರೆ ಬೇರೆ ಜನಾಂಗಗಳವರು, ಭಾಷೆಗಳವರು, ದೇಶಗಳವರು ಕ್ರಿಸ್ತನ ಮೂಲಕ ಸೇರಿ ಕೊಂಡಿರುವುದರಿಂದಲೇ ಕ್ರೈಸ್ತಸಭೆ ಸಾರ್ವತ್ರಿಕ ಸಭೆಯಾಗಿರುತ್ತದೆ. ತನ್ನ ಆರಾಧನೆ ಸೇವೆ ಮತ್ತು ಸುವಾರ್ತಾ ಕೆಲಸಗಳಿಂದ ದೇವರ ಸಂಕಲ್ಪವನ್ನು ನೆರವೇರಿಸುವುದು ಸಭೆಯ ಕರ್ತವ್ಯ. ಆದುದರಿಂದ ಸುವಾರ್ತಾಸೇವೆ ಅಂದರೆ ಯೇಸುಕ್ತಿಸ್ತನಲ್ಲಿ ದೊರಕಿರುವ ರಕ್ಷಣಾ ಸಂದೇಶವನ್ನು ಸಾರಿ ಹೇಳುವುದು ಸಭೆಯ ಆದ್ಯಕರ್ತವ್ಯ. `ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆ ದೇವರಶಕ್ತಿ ಸ್ವರೂಪವಾಗಿದ್ದು, ನಂಬುವವರೆಲ್ಲರಿಗೂ ರಕ್ಷಣೆ ಕೊಡುತ್ತದೆ. ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಅಧಿಕಾರ ನನ್ನದೇ. ಆದ್ದರಿಂದ ನೀವು ಹೋಗಿ ಎಲ್ಲ ದೇಶಗಳ ಜನರನ್ನೂ ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ; ನಾನು ನಿಮಗೆ ಬೋಧಿಸಿದ ರೀತಿ ಬದುಕುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿ, ನಾನು ಯುಗದ ಸಮಾಪ್ತಿಯವರೆಗೂ ನಿರಂತರ ನಿಮ್ಮ ಸಂಗಡ ಇರುತ್ತೇನೆ-ಇದು ಕ್ರಿಸ್ತೋಪದೇಶ.

	ಮಾನವಚರಿತ್ರೆಯ ವಿಷಯದಲ್ಲಿ ಕ್ರೈಸ್ತರಿಗೊಂದು ದೃಢವಾದ ನಿರೀಕ್ಷೆ ಇದೆ. ಸೃಷ್ಟಿಕರ್ತನಾದ ತಂದೆ ದೇವರು ಕ್ರಿಸ್ತನ ಮೂಲಕ ರಕ್ಷಣಾ ಮಾರ್ಗವನ್ನು ಮಾನವಗೆ ತಿಳಿಸಿದ್ದು ಮಾತ್ರವೇ ಅಲ್ಲ, ಮಾನವ ಚರಿತ್ರೆಯಲ್ಲಿ ತನ್ನ ಉದ್ದೇಶವನ್ನು ಸಾಧಿಸುತ್ತ ಕೊನೆಗೆ ಯುಗಾಂತ್ಯದಲ್ಲಿ ನ್ಯಾಯಾಧಿಪತಿಯಾಗಿ ಬರುವ ಕ್ರಿಸ್ತನ ಮೂಲಕ ದೇವರ ರಾಜ್ಯವನ್ನು ಸಂಪೂರ್ಣಗೊಳಿಸಿ ತನ್ನ ಸಂಕಲ್ಪವನ್ನು ನೆರವೇರಿಸುತ್ತಾನೆ-ಎಂಬುದು ಕ್ರೈಸ್ತ ನಿರೀಕ್ಷೆ. ಕಾಲ ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪಾಪೂರ್ಣ ಸಂಕಲ್ಪವನ್ನೂ ಪರಮಾತ್ಮ ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆ ಮಾಡಿಕೊಂಡಿದ್ದ. ಅದೇನೆಂದರೆ ಲೋಕದಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬುದು. ಈ ಮಹತ್ತಾದ ನಿರೀಕ್ಷೆಯನ್ನು ಮುಂದಿಟ್ಟುಕೊಂಡು ಕ್ರೈಸ್ತ ಸಭೆ ತನ್ನ ಆರಾಧನೆ, ಸೇವೆ, ಸುವಾರ್ತಾ ಪ್ರವಚನ-ಇವನ್ನು ಜವಾಬ್ದಾರಿಕೆಯಿಂದ ಲೋಕದ ಎಲ್ಲ ಕಡೆಗಳಲ್ಲಿ ಮುಂದುವರಿಸುತ್ತಿದೆ.			(ಎಸ್.ಜೆ.ಎಸ್.; ಎಚ್.ಎಸ್.)

	ಧರ್ಮಸಭೆಯ ಆಡಳಿತ : ಆಡಳಿತವರ್ಗದ ಈ ವಿಷಯದಲ್ಲಿ ರೋಮನ್ ಕೆಥೊಲಿಕ್ ಆರ್ಥೊಡಾಕ್ಸ್ ಸಭೆಯವರಿಗೂ ಪ್ರಾಟೆಸ್ಟಂಟರಿಗೂ ಏಕಾಭಿಪ್ರಾಯವಿಲ್ಲವಾಗಿ ಆಡಳಿತ ವರ್ಗಶ್ರೇಣಿ ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿದೆ. ಆದರೂ ಎಲ್ಲ ಶ್ರೇಣಿಗಳಲ್ಲೂ ಬೈಬಲ್ ಗ್ರಂಥದಲ್ಲಿಯೂ ಹುದುವಾಗಿ ಕಂಡುಬರುವ ವಿಷಯಗಳನ್ನು ಹೀಗೆ ಸಂಗ್ರಹಿಸಬಹುದು.

	ಅಪೋಸಲರು : ಯೇಸುವಿನ ಶಿಷ್ಯವರ್ಗದವರಾಗಿದ್ದು ಅವನ ಮರಣ ಪುನರುತ್ಥಾನ ಮತ್ತು ದಿವಾರೋಹಣಾನಂತರ ಅವನ ಸುವಾರ್ತೆಯನ್ನು ಲೋಕಕ್ಕೆ ಬಿತ್ತರಿಸಿದವರನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಇವರೇ ಧರ್ಮಸಭೆಯ ಮೂಲ ಪ್ರವರ್ತಕರು. ಇವರು ಹನ್ನೆರಡು ಮಂದಿ. ಇವರು ಯಾರು ಯಾರೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಇವರಲ್ಲಿ ಮೊದಲಿಗ ಸಂತ ಪಾಲನೆಂದು ಎಲ್ಲರೂ ಒಪ್ಪುತ್ತಾರೆ. ಇವರ ಉಪದೇಶಗಳ ವಿವರಗಳಿಗೆ (ನೋಡಿ- ಅಪೋಸಲರ-ಉಪದೇಶಗಳು).

	ಪ್ರವಾದಿಗಳು: ಇವರು ಅಪೋಸಲರೊಂದಿಗೆ ಸಹಕರಿಸಿ ಪ್ರಾರಂಭದಲ್ಲಿ ಧರ್ಮಸಭೆಗಳಿಗೆ ಸುಭದ್ರ ಬುನಾದಿ ಹಾಕಿದರು. ಬೋಧನೆಯ ಜೊತೆಗೆ ಇವರು ದೈವ ಕೃಪೆಯಿಂದ ಮುಂದಾಗುವುದನ್ನೂ ತಿಳಿದು ಹೇಳುತ್ತಿದ್ದರು.

	ಸೌವಾರ್ತಿಕರು : ಕ್ರಿಸ್ತರ ಬೋಧೆಯನ್ನು ಅಂದರೆ ಸುವಾರ್ತೆಯನ್ನು ಬರೆದಿಟ್ಟ ನಾಲ್ವರಿಗೆ (ಮತ್ತಾಯ, ಮಾರ್ಕ, ಲ್ಯೂಕ ಮತ್ತು ಯೋಹಾನ) ಈ ಹೆಸರಿದೆ. ಅದನ್ನು ಪ್ರಚಾರ ಮಾಡುವವರನ್ನೂ ಈಗ ಇದೇ ಹೆಸರಿನಿಂದ ಕರೆಯುತ್ತಾರೆ.

	ಬೋಧಕರು : ಯೇಸು ಜನತೆಗೆ ಬೋಧನೆ ಮಾಡಿದಂತೆ ಅವನ ಸುವಾರ್ತೆಯನ್ನು ಉಪಾಧ್ಯಾಯರಾಗಿ ಉಪದೇಶಮಾಡುವವರಿಗೆ ಈ ಹೆಸರು ಉಳಿದುಬಂದಿದೆ.

	ಸಭಾಪಾಲಕರು : ಕುರುವ ಕುರಿಮಂದೆಯನ್ನು ಕಾಪಾಡುವಂತೆ ಧರ್ಮಸಭೆಯ ಸದಸ್ಯರನ್ನು ಪಾಲನೆಮಾಡುವವರು (ಪ್ಯಾಸ್ಟರ್ಸ್). ಯೇಸುಕ್ರಿಸ್ತನನ್ನೇ ಹಿರಿಯ ಕುರುಬನೆನ್ನಲಾಗಿದೆ.

	ಕ್ರಿ.ಶ.ಎರಡನೆಯ ಶತಮಾನದಿಂದ ಸಭಾಧ್ಯಕ್ಷ (ಬಿಷಪ್) ಹಿರಿಯ ಸಭಾಪಾಲಕ (ಎಲ್ಡರ್ ಅಥವಾ ಪ್ಯಾಸ್ಟರ್) ಮತ್ತು ಸಭಾಸೇವಕ(ಡೀಕನ್)-ಎಂಬ ಮೂರು ಅಧಿಕಾರ ವರ್ಗಗಳು ಪ್ರಖ್ಯಾತವಾಗಿ ಉಳಿದು ಬಂದುವು. ಈಗಲೂ ಕ್ರೈಸ್ತ ಸಭೆಯ ಎಲ್ಲ ಪಂಗಡಗಳೂ ಈ ಮೂರು ವರ್ಗಗಳನ್ನು ಪುರಸ್ಕರಿಸಿವೆ.

	ಮೊದಲಿಗೆ ಸಭಾಧ್ಯಕ್ಷರಿಗೂ ಸಭಾಪಾಲರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಕ್ರಮೇಣ ಒಂದು ರೀತಿಯ ವಿಭಾಗವೇರ್ಪಟ್ಟಿತು. ಮೊದಮೊದಲು ಒಂದು ಸ್ಥಳಿಕ ಸಭೆಯಲ್ಲಿ ಒಬ್ಬನಿಗಿಂತ ಹೆಚ್ಚು ಸಭಾಧ್ಯಕ್ಷರಿರುತ್ತಿದ್ದರು. ಅನಂತರ ಒಂದೊಂದು ಸಭೆಗೆ ಒಬ್ಬೊಬ್ಬ ಅಧ್ಯಕ್ಷನಿರಬೇಕೆಂದು ನಿಗದಿಯಾಯಿತು. ಸಭೆಗಳನ್ನು ಶ್ರೇಣಿಕರಿಸಿ ಎಲ್ಲ ಸಭೆಗಳ ಮೇಲೆ ಹಿರಿಯ ಸಭಾಧ್ಯಕ್ಷನೊಬ್ಬನಿರಬೇಕೆಂಬ ಕ್ರಮ ಈಗ ರೂಢಿಯಲ್ಲಿದೆ. ಸಭಾಧ್ಯಕ್ಷನ ಕೈಕೆಳಗೆ ಸಭಾಪಾಲಕನಿರುತ್ತಾನೆ. ಸಭಾಸೇವಕ ಸಭಾಪಾಲಕನ ಕೆಳಗಿನ ಅಧಿಕಾರಿ.

	ಮತ ಪ್ರಚಾರಕ್ಕಾಗಿ ಧರ್ಮಸಭೆ ಆಗಿಂದಾಗ್ಯೆ ದೇಶವಿದೇಶಗಳಿಗೆ ಕಳಿಸಿ ಕೊಡುವ ಪ್ರಚಾರಕರನ್ನು ಮಿಷನರಿಗಳೆಂದು ಕರೆಯುತ್ತಾರೆ. ಇವರು ಆಯಾ ಧರ್ಮಸಭೆಯಿಂದಲೂ ಸ್ಥಳೀಯ ಸಂಘಸಂಸ್ಥೆಗಳಿಂದಲೂ ಸಹಾಯ ಪಡೆದುಕೊಂಡು ಶಾಲೆ, ಆಸ್ಪತ್ರೆ ಮೊದಲಾದ ಸಾರ್ವಜನಿಕ ಸೇವಾಕಾರ್ಯಗಳನ್ನು ನಡೆಸುತ್ತ ಧರ್ಮಬೋಧೆ ಮಾಡುತ್ತಿರುತ್ತಾರೆ. 
(ಎಸ್.ಎ.ಕೆ.ಯು; ಎಚ್.ಎಸ್.)

	ಭಾರತದಲ್ಲಿ ಕ್ರೈಸ್ತಧರ್ಮ: ಕ್ರೈಸ್ತಧರ್ಮದ ಚರಿತ್ರೆಯನ್ನು ವಿಚಾರ ಮಾಡುವಾಗ ಅದು ಭಾರತದೇಶಕ್ಕೆ ಬಂದ ಬಗೆ ಮತ್ತು ಅದರ ವ್ಯಾಪ್ತಿಗಳನ್ನು ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಅವಶ್ಯಕ. ಭರತಖಂಡದಲ್ಲಿ ಹಿಂದೂ ಧರ್ಮ ಬಹು ಪಕ್ಷೀಯ ಧರ್ಮವಾಗಿದ್ದರೂ ಆರಂಭದಿಂದಲೇ ಇತರ ಧರ್ಮಗಳಿಗೂ ಈ ದೇಶದಲ್ಲಿ ಮನ್ನಣೆ ದೊರಕುತ್ತ ಬಂದಿದೆ. ಕ್ರಿಸ್ತಶಕದ ಮೊದಲ ಶತಮಾನದಲ್ಲಿಯೇ ಇಲ್ಲಿಗೆ ಬಂದ ಕ್ರೈಸ್ತಧರ್ಮ ಕ್ರಮೇಣ ಬೇರೂರಿ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ, ಜೀವನಕ್ಕೆ ಸಹಾಯ ಮಾಡುತ್ತಿದೆ ಎಂಬುದು ಇಲ್ಲಿ ಸಮಾಧಾನದ ಸಂಗತಿ.

	ದಕ್ಷಿಣ ಭಾರತದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಕಾರ್ಯ ಮೂರೂ ಸಮುದ್ರತೀರಗಳ ರೇವುಗಳಲ್ಲಿ ಆರಂಭವಾಯಿತು. ಪಶ್ಚಿಮ ತೀರದಲ್ಲಿ ಕ್ರಾಂಗನೂರು ಮತ್ತು ಗೋವ, ಪೂರ್ವದಲ್ಲಿ ಟ್ರಾಂಕ್ವಿಬಾರ್-ಈ ಸ್ಥಳಗಳಲ್ಲಿ ಸಿರಿಯನ್, ರೋಮನ್ ಕೆಥೊಲಿಕ್ ಮತ್ತು ಪ್ರಾಟೆಸ್ಟಂಟ್ ಮಿಷನುಗಳು ಸುವಾರ್ತಾ ಸೇವೆಯನ್ನು ಆರಂಭಿಸಿದುವು.

	ಪಶ್ಚಿಮ ತೀರಕ್ಕೂ ಪೌರಸ್ತ್ಯ ಸಭೆಗಳಿಗೂ ಮೊದಲ ಶತಮಾನದಿಂದಲೇ ಸಂಬಂಧವಿತ್ತೆಂದು ಹೇಳಬಹುದು. ಅಪೋಸಲ ಥಾಮಸ್ ತಾನೇ ಸುಮಾರು ಕ್ರಿ.ಶ 52ರಲ್ಲಿ ದಕ್ಷಿಣ ಭಾರತಕ್ಕೆ ಬಂದು ಮಲಬಾರಿನ ತೀರದಲ್ಲಿ ಹಲಕೆಲವು ಸಭೆಗಳನ್ನು ಸ್ಥಾಪಿಸಿದನೆಂದು ಕೇರಳದ ಸಿರಿಯನ್ ಕ್ರೈಸ್ತರು ಹೇಳುತ್ತಾರೆ. ಆ ಮೇಲೆ ಈ ಭಕ್ತ ಪೂರ್ವ ತೀರಕ್ಕೆ ಹೋಗಿ ಮದ್ರಾಸಿನ ಬಳಿಯಲ್ಲಿ ಕೊಲ್ಲಲ್ಪಟ್ಟನೆಂಬ ಐತಿಹ್ಯವಿದೆ. ಹೇಗೂ ಮೊದಲಿನ ಶತಮಾನದಲ್ಲೇ ಕ್ರೈಸ್ತಧರ್ಮ ಭಾರತಕ್ಕೆ ಬಂತು. ಆದರೆ ಪ್ರಚಾರಕರು ಸುವಾರ್ತಾ ಸೇವೆಗೆ ಹೆಚ್ಚಿನ ಗಮನ ಕೊಡದಿದ್ದುದರಿಂದ ಅದು ದೇಶದ ಇತರ ಭಾಗಗಳಿಗೆ ಹಬ್ಬಲಿಲ್ಲ.

	ವ್ಯಾಸ್ಕೊಡಗ್ಯಾಮ 1498ರಲ್ಲಿ ಕಲ್ಲಿಕೋಟೆಗೆ ಬಂದು ಮುಟ್ಟಿದ್ದು ಯೂರೋಪು ಮತ್ತು ಭಾರತಗಳ ಸಂಪರ್ಕದಲ್ಲೇ ದೊಡ್ಡದೊಂದು ಮೈಲಿಗಲ್ಲು ಎಂದು ಹೇಳಬೇಕು. ಆಮೇಲೆ ಬಹು ಬೇಗನೆ ಪೋರ್ಚುಗಲ್ಲಿನಿಂದ ರೋಮನ್ ಕೆಥೊಲಿಕ್ ಪ್ರಚಾರ ತಂಡಗಳು ಮುಖ್ಯವಾಗಿ ಗೋವ, ಕೊಚ್ಚಿ ಮೊದಲಾದ ಸ್ಥಳಗಳನ್ನು ಸೇವಾ ಕೇಂದ್ರಗಳನ್ನಾಗಿ ಮಾಡಿಕೊಂಡು ತಮ್ಮ ಕೆಲಸವನ್ನು ಆರಂಭಿಸಿದುವು. ಭಾರತದ ಅಪೋಸಲನೆಂದು ಹೆಸರು ಹೊತ್ತು ಫ್ರಾನ್ಸಿಸ್ ಜೇóವಿಯರ್ ಎಂಬಾತ ಭಾರತಕ್ಕೆ ಬಂದ ಜೆಸ್ಯೂಟ್ ಪ್ರಚಾರಕರಲ್ಲಿ ಮೊದಲನೆಯವ. ರಾಬರ್ಟ್ ಡಿ.ನೋಬಿಲಿ ಎಂಬಾತ ಸಹ ಹಿಂದೂ ಸಂಸ್ಕøತಿಯ ಹಿನ್ನೆಲೆಗೆ ಮನ್ನಣೆ ಕೊಟ್ಟು ಸಂನ್ಯಾಸಿಯ ಮಾರ್ಗವನ್ನವಲಂಬಿಸಿ ತನ್ನ ಕೆಲಸವನ್ನು ಮುಂದುವರಿಸಿದ. ಮುಂದಣ ಶತಮಾನಗಳಲ್ಲಿ ಕೂಡ ರೋಮನ್ ಕೆಥೊಲಿಕ್ ಪ್ರಚಾರಸಂಸ್ಥೆಗಳು ಮುಖ್ಯವಾಗಿ ತಮ್ಮ ಪ್ರಸಿದ್ಧ ವಿದ್ಯಾಸಂಸ್ಥೆಗಳ ಮೂಲಕ ಈ ದೇಶದಲ್ಲಿ ತಮ್ಮ ಕ್ರೈಸ್ತ ಸೇವೆಯನ್ನು ಮುಂದುವರಿಸುತ್ತಿವೆ. ದೇಶೀಯ ಮುಂದಾಳುಗಳನ್ನು ತರಬೇತು ಮಾಡಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಸುವ ವಿಷಯದಲ್ಲಿ ರೋಮನ್ ಕೆಥೊಲಿಕ್ ಸಭೆಗಳು ಹೆಚ್ಚಿನ ಪ್ರಯತ್ನ ಮಾಡಿವೆ.

	ತಿರುಚಿರಪಳ್ಳಿಯ ಹತ್ತಿರವಿರುವ ಟ್ರಾಂಕ್ವಿಬಾರ್ ಎಂಬುದು ದಕ್ಷಿಣ ಭಾರತದಲ್ಲಿ ಪ್ರಾಟೆಸ್ಟಂಟ್ ಕ್ರೈಸ್ತ ಸಭೆಯ ಉಗಮ ಸ್ಥಾನವೆನ್ನಬಹುದು. ಈ ಪಶ್ಚಿಮತೀರದ ಪಟ್ಟಣಕ್ಕೆ 1706ರರಲ್ಲಿ ಡೆನ್ಮಾರ್ಕಿನ ಅರಸನ ಆಶ್ರಯ ಹೊಂದಿದ್ದ ಇಬ್ಬರು ಜರ್ಮನ್ ಪ್ರಚಾರಕರು ಬಂದಿಳಿದರು. ತೊಂದರೆ, ಇಕ್ಕಟ್ಟು, ಕಷ್ಟಗಳ ಮಧ್ಯದಲ್ಲಿಯೂ ಇವರ ಸೇವೆ ಫಲದಾಯಕವಾಗಿ ಮುಂದುವರಿಯಿತು. ಜಿಗೆನ್ ಬಾಲ್ಗ್ ನಾಲ್ಕು ಸುವಾರ್ತೆಗಳನ್ನು ತಮಿಳು ಭಾಷೆಗೆ ಭಾಷಾಂತರಿಸಿದ್ದು(1714) ದೊಡ್ಡ ಪ್ರಯತ್ನ. ಈ ಪ್ರಚಾರಕರಲ್ಲಿ ಅತಿ ಪ್ರಸಿದ್ಧನಾದವ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಸುಮಾರು 50 ವರ್ಷಗಳ ವರೆಗೆ ಸೇವೆ ಮಾಡಿದ ಸಿ.ಎಫ್.ಷ್ವಾರ್‍ಟ್ಸ್. ತಂಜಾವೂರಿನ ರಾಜನೊಡನೆಯೂ ಹೈದರ್ ಆಲಿಯೊಡನೆಯೂ ಬ್ರಿಟಿಷರೊಡನೆಯೂ ಹೆಚ್ಚಿನ ಸ್ನೇಹ ಸಂಪರ್ಕವನ್ನಿಟ್ಟುಕೊಂಡಿದ್ದರಿಂದ ಈತನಿಗೆ ಕ್ಷಾಮ ಸಮಯಗಳಲ್ಲಿ ಎಷ್ಟೋ ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು.

	ಕಾಲಕ್ರಮೇಣ ಯೂರೋಪು ಮತ್ತು ಅಮೆರಿಕ ಖಂಡಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದ ಅನೇಕ ಪ್ರಚಾರಕ ಸಂಸ್ಥೆಗಳು ಈ ದೇಶದಲ್ಲೆಲ್ಲ ಕೆಲಸವನ್ನು ಮುಂದುವರಿಸಿದುವು. ಉತ್ತರ ಹಿಂದೂಸ್ಥಾನದಲ್ಲಿ 1793ರಲ್ಲಿ ವಿಲಿಯಮ್ ಕ್ಯಾರಿ ಬಂದಿಳಿದಾಗ ಭಾರತದ ಕ್ರೈಸ್ತ ಸಭಾ ಚರಿತ್ರೆ ಹೊಸತೊಂದು ಮೈಲಿಗಲ್ಲನ್ನು ಮುಟ್ಟಿದಂತಾಯಿತು. ಏಕೆಂದರೆ ಅದುವರೆಗೆ ಭಾರತಕ್ಕೆ ಬಂದಿದ್ದ ಇತರ ಪ್ರಚಾರಕರಂತಲ್ಲದೆ, ಕ್ಯಾರಿ ಒಂದು ಪ್ರಚಾರ ಸಂಸ್ಥೆಯ ಪ್ರತಿನಿಧಿಯಾಗಿ ಭಾರತಕ್ಕೆ ಬಂದ. ಆಧುನಿಕ ಪ್ರಚಾರ ಸೇವೆಯ ಪಿತೃ ಎಂಬ ಬಿರುದು ಕ್ಯಾರಿಗೆ ಸಹಜವಾಗಿ ಸಲ್ಲುತ್ತದೆ. ಬೈಬಲನ್ನು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸುವುದರಲ್ಲಿ, ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ, ಪತ್ರಿಕೆ ಮತ್ತು ಸಾಹಿತ್ಯ ರಚನೆಗಳನ್ನು ಆರಂಭಿಸುವುದರಲ್ಲಿ ಅನಿವಾರ್ಯವಾಗಿ ಕಷ್ಟ ತೊಂದರೆಗಳಿರುವಾಗಲೂ ತನ್ನ ಧ್ಯೇಯವನ್ನು ಅಚಲವಾಗಿ ಅನುಸರಿಸಿದ ಧೈರ್ಯ ತಾಳ್ಮೆಗಳ ನಿಮಿತ್ತ ಕ್ಯಾರಿಗೆ ಉತ್ತರ ಹಿಂದೂಸ್ತಾನದ ಕ್ರೈಸ್ತಧರ್ಮ ಪ್ರಚಾರಕ್ಷೇತ್ರದಲ್ಲಿ ಅಗ್ರಸ್ಥಾನ ಸಲ್ಲಬೇಕು. ಭಕ್ತಿಮಾರ್ಗದ ಅಭಿವೃದ್ದಿಗಾಗಿಯೂ ವಿದ್ಯಾಭಿವೃದ್ಧಿಗಾಗಿಯೂ ಕ್ರೈಸ್ತ ತತ್ತ್ವ ನಿರೂಪಣೆಯ ಅಭ್ಯಾಸಕ್ಕಾಗಿಯೂ ಕಲ್ಕತ್ತದ ಹತ್ತಿರವಿರುವ ಸೆರಾಂಪೂರ್‍ನಲ್ಲಿ ಒಂದು ದೊಡ್ಡ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ಏಷ್ಯ ಖಂಡದಲ್ಲಿ ಇದು ಸ್ಥಾಪಿತವಾದ ಇಂಥ ಆದ್ಯ ವಿಶ್ವವಿದ್ಯಾಲಗಳಲ್ಲಿ ಒಂದೆನಿಸಿದೆ.

	ಇಂದು ಭಾರತದ ಕ್ರೈಸ್ತ ಸಭೆಯಲ್ಲಿ ಸುಮಾರು ಹತ್ತು ದಶಲಕ್ಷಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಅನೇಕ ಪ್ರಚಾರ ಸಂಘಗಳು ತಮ್ಮ ಆಡಳಿತದ ಜವಾಬ್ದಾರಿಯನ್ನು ಭಾರತೀಯ ಸಭೆಗಳಿಗೆ ಕ್ರಮೇಣ ಒಪ್ಪಿಸಿಕೊಡುವ ಧೋರಣೆಯನ್ನು ಮುಂದುವರಿಸುತ್ತಿವೆ. ಕ್ರೈಸ್ತ ಪ್ರಚಾರ ಸಂಘಗಳ ಸೇವೆಯ ಫಲವಾಗಿ ದೇಶಕ್ಕೆ ಅನೇಕ ರೀತಿಯ ಪ್ರಯೋಜನಗಳಾಗಿವೆ. ಭಾರತದ ಭಾಷೆಗಳ ಪ್ರಗತಿಗೆ, ಸಾಹಿತ್ಯ ರಚನೆಗೆ ಅನೇಕ ಪಾದ್ರಿಗಳು ಸ್ಫೂರ್ತಿ, ಸಹಾಯಗಳನ್ನು ನೀಡಿದ್ದಾರೆ. ನೀಡುತ್ತಿದ್ದಾರೆ. ತಮಿಳು ಭಾಷೆಯಲ್ಲಿ ಫಾದರ್ ಬೆಶಿ, ಕನ್ನಡದಲ್ಲಿ ಕಿಟ್ಟೆಲ್, ಬಂಗಾಳಿಯಲ್ಲಿ ಕ್ಯಾರಿ ಮೊದಲಾದವರು ಈ ವಿಷಯದಲ್ಲಿ ಮಾಡಿದ ಸೇವೆ ಗಮನಾರ್ಹವಾಗಿದೆ. ಅಲ್ಲದೆ ದೇಶದ ಬಡಜನ, ಸಾಮಾಜಿಕ ಆರ್ಥಿಕ ದೃಷ್ಟಿಯಿಂದ ಕೀಳ್ಮಟ್ಟದಲ್ಲಿದ್ದವರು. ಬೇರೆ ಬೇರೆ ರೀತಿಯಲ್ಲಿ ಕಷ್ಟಕ್ಕೊಳಗಾದವರು-ಇವರಿಗೆ ನಾನಾ ವಿಧವಾಗಿ ಸೇವೆ ಮಾಡುವವರ ಮೂಲಕ ಪ್ರಚಾರಸಂಸ್ಥೆಗಳು ಎಷ್ಟೋ ಸುಧಾರಣಾ ಕೆಲಸಗಳಿಗೆ ಸ್ಫೂರ್ತಿ ನೀಡಿವೆ. ಮಾರ್ಗದರ್ಶನ ಮಾಡಿವೆ. ಆಸ್ಪತ್ರೆಗಳು, ಅನಾಥಾಲಯಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ಇನ್ನೂ ಅನೇಕ ಸೇವಾ ಕೇಂದ್ರಗಳು-ಇವುಗಳ ಮೂಲಕ ಕ್ರೈಸ್ತಧರ್ಮವನ್ನು ಪ್ರಚುರಪಡಿಸುವ ಕಾರ್ಯ ಮುಂದುವರಿಯುತ್ತಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಮತ್ತು ಅದೇ ವರ್ಷದಲ್ಲಿ ದಕ್ಷಿಣ ಭಾರತ ಸಂಘಟಿತ ಸಭೆಯ ಸ್ಥಾಪನೆಯಾದ ಮೇಲೆ ಕ್ರೈಸ್ತ ಧರ್ಮ ಜನಾಂತ ಜೀವನದಲ್ಲಿ ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ರೀತಿಯಲ್ಲಿ ಭಾಗವಹಿಸುವಂತಾಯಿತು. ಕ್ರೈಸ್ತಧರ್ಮ, ಪರಧರ್ಮ, ಪಾಶ್ಚಾತ್ಯ ಸಂಸ್ಕøತಿಯನ್ನವಲಂಬಿಸಿದುದು; ದೇಶಪ್ರೇಮವನ್ನೂ ಜನಾಂಗಿಕ ಜವಾಬ್ದಾರಿಯನ್ನೂ ಅಸಡ್ಡೆ ಮಾಡುತ್ತಿದೆ-ಎಂಬಿವೇ ಮೊದಲಾದ ಆಧಾರವಿಲ್ಲದ ಅಪವಾದಗಳನ್ನು ತೆಗೆದುಹಾಕಲು ನಿರಂತರ ಪ್ರಯತ್ನನಡೆಯುತ್ತಿದೆ. ಕ್ರೈಸ್ತ ತತ್ತ್ವ ನಿರೂಪಣೆಯ ರೀತಿಯಲ್ಲಿಯೂ ಆರಾಧನಾ ಕ್ರಮಗಳಲ್ಲಿಯೂ ಭಾರತೀಯ ಸಾಂಸ್ಕøತಿಕ ಹಿನ್ನೆಲೆಗೆ ಸಂಬಂಧಿಸಿದ ವಿಷಯಗಳನ್ನು ಉಪಯೋಗಿಸಿಕೊಳ್ಳುವ ಪ್ರಯತ್ನಗಳಾಗುತ್ತಿವೆ. ಅಲ್ಲಲ್ಲಿ ಕ್ರೈಸ್ತ ಆಶ್ರಮಗಳ ಮೂಲಕ ದೇಶೀಯ ಧಾರ್ಮಿಕ ಸಾಧನಗಳನ್ನೂ ಉಪಯೋಗಿಸಿಕೊಂಡು ಕ್ರೈಸ್ತ ಸಂದೇಶವನ್ನೂ ಸರಳ ಜೀವನವನ್ನೂ ರೂಪಿಸಲು ಸಭೆ ಮುಂದೆ ಬರುತ್ತಲಿದೆ. ತಿರುಪತ್ತೂರಿನಲ್ಲಿ 1921ರಲ್ಲಿ ಸ್ಥಾಪಿತವಾದ ಕ್ರಿಸ್ತಕುಲ ಆಶ್ರಮ ಇದಕ್ಕೊಂದು ಮುಖ್ಯ ಉದಾಹರಣೆ. ಅಷ್ಟೇ ಅಲ್ಲ, ಕ್ರೈಸ್ತ ತತ್ತ್ವ ನಿರೂಪಣೆಯಲ್ಲಿ ಭಾರತದ ವಿಚಾರ ಸರಣಿಯನ್ನು ಉಪಯೋಗಿಸುವುದರ ಮೂಲಕವೂ ಸಭೆಯ ಸಾಮೂಹಿಕ ಆರಾಧನೆಗಳಲ್ಲಿ ದೇಶೀಯ ಭಜನೆ, ಸಂಗೀತ, ಮೊದಲಾದವನ್ನು ಬಳಕೆಗೆ ತರುವುದರ ಮೂಲಕವೂ ಕ್ರೈಸ್ತ ಧರ್ಮ ತನ್ನ ತಿರುಳನ್ನು ಕಾಪಾಡಿಕೊಂಡೇ ಭಾರತೀಯ ಸಂಸ್ಕøತಿಯಲ್ಲಿ ಬೇರು ಬಿಡಲು ಹೆಚ್ಚಿನ ಪ್ರಯತ್ನ ಮಾಡುತ್ತಲಿದೆ. ಜಾತಿ ಮತ ಭೇದಗಳಿಲ್ಲದೆ ಸ್ನೇಹ, ಪ್ರೀತಿ, ಅನ್ಯೊನ್ಯತೆಗಳನ್ನು ಕ್ರಿಸ್ತನ ಸಂದೇಶದ ಆಧಾರದ ಮೇಲೆಕಟ್ಟುವ ಮನಸ್ಸು, ಜನಾಂಗ ಜೀವನದಲ್ಲಿ ಜವಾಬ್ದಾರಿಕೆಯಿಂದ ಭಾಗವಹಿಸುವ ಧೋರಣೆ-ಇವನ್ನು ಭಾರತದ ಸಭೆಯಲ್ಲೀಗ ಹೆಚ್ಚು ಹೆಚ್ಚಾಗಿ ಕಂಡುಕೊಳ್ಳಬಹುದು. ಒಟ್ಟಾರೆ ಹೇಳುವುದಾದರೆ ಕ್ರೈಸ್ತ ಧರ್ಮ ಭಾರತದಲ್ಲಿ ಬೇರೂರಿ ಇತರ ಧರ್ಮಗಳ ಮಧ್ಯೆ ಮನ್ನಣೆಯ ಸ್ಥಾನವನ್ನು ಗಳಿಸಿಕೊಂಡಿದೆ. 
(ಎಸ್.ಜೆ.ಎಸ್.; ಡಿ.ವಿ.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ